ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಹಳೇ ಹಾದಿ ತುಳಿಯುತ್ತಿದ್ದಾರೆ. ಜೆಡಿಎಸ್ ತ್ಯಜಿಸುವಾಗ ನಡೆದುಕೊಂಡ ರೀತಿಯಲ್ಲಿಯೇ, ಕಾಂಗ್ರೆಸ್‌ನಲ್ಲಿ ಬೇಸತ್ತಿರುವ ಅವರು ಪಕ್ಷ ತೊರೆಯುವ ಸ್ಪಷ್ಟ ಸಂದೇಶ ರವಾನಿಸುವ ಯತ್ನ ಮಾಡಿದ್ದಾರೆ.
ಸುತ್ತೂರಿನಲ್ಲಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಒಂದೇ ಹೆಲಿಕಾಪ್ಟರ್‌ನಲ್ಲಿ ಭಾನುವಾರ ಪ್ರಯಾಣ ಬೆಳೆಸಿದ್ದಾರೆ.
ಹಾವೇರಿ ಜಿಲ್ಲೆ ಕಾಗಿನೆಲೆಯಿಂದ ಸುತ್ತೂರಿಗೆ ಜೊತೆಯಾಗಿಯೇ ಆಗಮಿಸಿದ ಇಬ್ಬರು, ಇದೇ ಮೊದಲ ಬಾರಿಗೆ ಸಾರ್ವಜನಿಕ ಸಮಾರಂಭದಲ್ಲಿಯೂ ಜೊತೆಯಾಗಿಯೇ ಕಾಣಿಸಿಕೊಂಡರು. ಹೈದರಾಬಾದ್‌ನಲ್ಲಿ ನಡೆದ ಕುರುಬರ ಸಮಾವೇಶದಲ್ಲಿ ಪಾಲ್ಗೊಂಡ ನಂತರ ಸಿದ್ದು, ಅಹಿಂದ ಸಮಾವೇಶ ನಡೆಸುವ ಆಲೋಚನೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿಯೇ ಸಿಎಂ ಯಡಿಯೂರಪ್ಪ ಜೊತೆ ಪ್ರಯಾಣ ಬೆಳೆಸಿದ್ದಾರೆ.
ವೇದಿಕೆಯಲ್ಲಿ ಸಿದ್ದು ಹಾಗೂ ಯಡಿಯೂರಪ್ಪ ಅಕ್ಕಪಕ್ಕ ಕುಳಿತಿರುವಾಗಲೇ ಸಿದ್ದರಾಮಯ್ಯ ಬಿಜೆಪಿ ಸೇರಲಿ ಎಂದು ಶಂಕರಲಿಂಗೇಗೌಡ ಹೇಳಿದರು. ಕಾಂಗ್ರೆಸ್‌ನಲ್ಲಿ ನಾಯಕತ್ವದ ವಿರುದ್ಧ ತಿರುಗಿ ಬಿದ್ದರುವ ಶಾಸಕ ವಿ.ಸೋಮಣ್ಣ ಕೂಡ ಇದಕ್ಕೆ ದನಿಗೂಡಿಸಿದರು. ಎಲ್ಲಿ ಗೌರವ ಸಿಗುತ್ತದೋ ಸಿದ್ದರಾಮಯ್ಯ ಅಲ್ಲಿಗೆ ಹೋಗಲಿ. ನಾನು ಬೆಂಬಲಿಸಿ ಕೈಲಾದಷ್ಟು ನೆರವಾಗುತ್ತೇನೆ ಎಂದು ಹೇಳಿದರು.
ಇಬ್ಬರು ಜೊತೆಯಾಗಿ ಪ್ರಯಾಣಿಸಿದ್ದಕ್ಕೆ ಯಾವುದೇ ಅರ್ಥ ಕಲ್ಪಿಸಬೇಕಾಗಿಲ್ಲ ಎಂದು ಸಿದ್ದರಾಮಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
|