ಮಂಗಳೂರಿನಲ್ಲಿ ಪಬ್ ಮೇಲೆ ನಡೆದ ದಾಳಿ ದುರಾದೃಷ್ಟಕರವಾದದ್ದು ಎಂದು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ ಇಡೀ ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುವಂತೆ ಸಂಪೂರ್ಣ ಜವಾಬ್ದಾರಿ ನೀಡಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಯಾರೂ ಕೂಡ ಕಾನೂನನ್ನು ತಮ್ಮ ಕೈಗೆತ್ತಿಕೊಳ್ಳಲು ಅವಕಾಶ ನೀಡುವುದಿಲ್ಲ, ಆ ನಿಟ್ಟಿನಲ್ಲಿ ಪಬ್ ಘಟನೆಯಲ್ಲಿ ಭಾಗಿಯಾದವರ ವಿರುದ್ ಕಠಿಣ ಕ್ರಮ ಜರುಗಿಸಲಾಗುವುದು. ಅದಕ್ಕಾಗಿ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಮಂಗಳೂರಿನ ಬಲ್ಮಠ ಸಮೀಪದ ಪಬ್‌ವೊಂದರ ಮೇಲೆ ಶ್ರೀರಾಮ ಸೇನೆಯ ಕಾರ್ಯಕರ್ತರು ದಾಳಿ ನಡೆಸಿ, ಅಲ್ಲಿ ಅರೆಬೆತ್ತಲೆ ನರ್ತನದಲ್ಲಿ ತೊಡಗಿದ್ದವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು. 60ನೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಇಂತಹದ್ದೊಂದು ಅಮಾನುಷ ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ನಿಜಕ್ಕೂ ಶೇಮ್ ಎಂದು ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗತೊಡಗಿದೆ.
ಘಟನೆಗೆ ಸಂಬಂಧಿಸಿದಂತ ಶ್ರೀರಾಮಸೇನೆಯ 13ಮಂದಿಯನ್ನು ಬಂಧಿಸಲಾಗಿದ್ದು, ಜನವರಿ 27ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಯಾರಿಗೂ ಜಾಮೀನು ಸಿಕ್ಕಿಲ್ಲ ಎಂಬುದಾಗಿ ಪಶ್ಚಿಮವಲಯ ಐಜಿ ಎನ್‌ಡಿಟಿವಿಯೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ. ದಾಳಿಯ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸುಮಾರು 30ಮಂದಿ ಇದ್ದಿರಬಹುದೆಂದು ಪೊಲೀಸ್ ಇಲಾಖೆ ಶಂಕಿಸಿದ್ದು, ಶ್ರೀರಾಮಸೇನೆಯ ದಿನಕರ ಶೆಟ್ಟಿ, ಪ್ರಸಾದ್ ಅತ್ತಾವರ್ ನಾಪತ್ತೆಯಾಗಿದ್ದು, ಅವರ ಬಂಧನಕ್ಕೆ ತೀವ್ರ ಶೋಧ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದಾಳಿಯಲ್ಲಿ ಶಾಮೀಲಾದವರ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಬಂಧಿತರ ವಿರುದ್ಧ ಗೂಂಡಾ ಕಾಯ್ದೆ ಬಳಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿಯೂ ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ. ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು. |