ಮಂಗಳೂರಿನ ಬಲ್ಮಠ ಸಮೀಪದ ಪಬ್‌ವೊಂದರ ಮೇಲೆ ದಾಳಿನಡೆಸಿದ ಶ್ರೀರಾಮ ಸೇನೆಯ ಸಹಸಂಚಾಲಕ ಪ್ರಸಾದ್ ಅತ್ತಾವರರನ್ನು ಪೊಲೀಸರು ಬಂಧಿಸಿದ್ದಾರೆ. ಈತನೊಂದಿಗೆ ಇತರ 25 ಮಂದಿಯೂ ಬಂಧನಕ್ಕೀಡಾಗಿದ್ದಾರೆ.
ಕಾಲೇಜು ಯುವಕ ಯವತಿಯರು ಕುಡಿದು ಚಿತ್ತಾಗಿ ಅಶ್ಲೀಲ ನರ್ತನದಲ್ಲಿ ತೊಡಗಿದ್ದ ವೇಳೆ ಪಬ್ ಮೇಲೆ ಶ್ರೀರಾಮಸೇನೆಯ ಕಾರ್ಯಕರ್ತರು ಏಕಾಏಕಿ ದಾಳಿ ನಡೆಸಿ, ಅಲ್ಲಿ ಅರೆಬೆತ್ತಲೆ ನರ್ತನದಲ್ಲಿ ತೊಡಗಿದ್ದವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಇದರ ದೃಶ್ಯವು ರಾಜ್ಯ, ರಾಷ್ಟ್ರಮಟ್ಟದ ಟಿವಿ ವಾಹಿನಿಗಳಲ್ಲಿ ಪದೇಪದೇ ಪ್ರಸಾರವಾಗಿದ್ದು, ದಾಳಿಯನ್ನು ವ್ಯಾಪಕವಾಗಿ ಖಂಡಿಸಲಾಗಿದೆ.
ದಾಳಿಯ ಸಂದರ್ಭದಲ್ಲಿ ಶ್ರೀರಾಮ ಸೇನೆಯ ಸುಮಾರು 30ಮಂದಿ ಇದ್ದಿರಬಹುದೆಂದು ಪೊಲೀಸರು ಶಂಕಿಸಿದ್ದರು. ಈ ಘಟನೆಯನ್ನು ಮಾದ್ಯಮಗಳ ಮುಂದೆ ಸಮರ್ಥಿಸಿಕೊಂಡಿದ್ದ ಸಂಘಟನೆಯ ಮುಖ್ಯಸ್ಥ, ಘಟನೆಯು ಕಾವೇರುತ್ತಿರುತ್ತಿದ್ದು ಬಹುವಾಗಿ ಚರ್ಚಿತವಾಗುತ್ತಿರುವಂತೆ ನಾಪತ್ತೆಯಾಗಿದ್ದರು. ಇದೀಗ ಅವರನ್ನು ಕಳೆದ ರಾತ್ರಿ ಬಂಧಿಸಾಗಿದೆ.
ದಾಳಿಯಲ್ಲಿ ಶಾಮೀಲಾದವರ ಬಂಧನಕ್ಕಾಗಿ ವಿಶೇಷ ತಂಡವನ್ನು ರಚಿಸಲಾಗಿದೆ. ಬಂಧಿತರ ವಿರುದ್ಧ ಗೂಂಡಾ ಕಾಯ್ದೆ ಬಳಸುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿಯೂ ರಾಜ್ಯ ಗೃಹ ಸಚಿವ ವಿ.ಎಸ್.ಆಚಾರ್ಯ ತಿಳಿಸಿದ್ದಾರೆ. ಈ ಕೃತ್ಯ ಎಸಗಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ.
ಕಾಲೇಜು ಬಂದ್ ಪಬ್ ಮೇಲೆ ಯುವತಿಯರ ಮೇಲೆ ಅಮಾನುಷ ಹಲ್ಲೆ ನಡೆಸಿರುವುದನ್ನು ಪ್ರತಿಭಟಿಸಿ ಮಂಗಳೂರಿನ ಕಾಲೆಜುಗಳು ಮಂಗಳವಾರ ಬಂದ್‌ಗೆ ಕರೆ ನೀಡಿವೆ.
ಬಸ್‌ಗಳಿಗೆ ಕಲ್ಲುತೂರಾಟ ಶ್ರೀರಾಮ ಸೇನೆಯ ಕಾರ್ಯಕರ್ತರ ಬಂಧನದ ಹಿನ್ನೆಲೆಯಲ್ಲಿ ರಾಜ್ಯಸಾರಿಗೆ ಸಂಸ್ಥೆಯ ನಾಲ್ಕು ಬಸ್ಸುಗಳು ಹಾಗೂ ಲಾರಿಯೊಂದಕ್ಕೆ ಶನಿವಾರ ನಸುಕಿನಲ್ಲಿ ದುರ್ಷ್ಕರ್ಮಿಗಳು ಕಲ್ಲು ತೂರಿದ್ದಾರೆ. ಅಲ್ಲದೆ, ಲಾರಿಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾರೆ. ಈ ಘಟನೆಯು ಮಂಗಳೂರಿನ ಹೊರವಲಯದ ಅಳಪೆ ಎಂಬಲ್ಲಿ ಸಂಭವಿಸಿದೆ. ದುಷ್ಕರ್ಮಿಗಳು ಬೆಂಗಳೂರು ಬಸ್ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಕೆಲಪ್ರಯಾಣಿಕರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮೂವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.
ರಾಜ್‌ನಾಥ್ ಸಿಂಗ್ ಖಂಡನೆ ರಾಷ್ಟ್ರೀಯ ಸಮಾರಂಭವೊಂದರಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿರುವ ಬಿಜೆಪಿ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಯುವತಿಯರ ಮೇಲಿನ ದಾಳಿಯನ್ನು ಖಂಡಿಸಿದ್ದಾರೆ. ಇದು ಈ ರೀತಿಯ ಹಲ್ಲೆ ಭಾರತೀಯ ಸಂಸ್ಕೃತಿಯಲ್ಲ ಎಂದಿದ್ದಾರೆ. ಅಲ್ಲದೆ ಯಾರೇ ಆದರೂ ಕಾನೂನನ್ನು ಕೈಗೆತ್ತಿಕೊಳ್ಳುವಂತಿಲ್ಲ ಮತ್ತು ರಾಜ್ಯದ ಬಿಜೆಪಿ ಸರ್ಕಾರವು ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತಿದೆ ಎಂದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿದ್ದ ಮುಖ್ಯಮಂತ್ರಿ ಯಡುಯೂರಪ್ಪ ಶ್ರೀರಾಮ ಸೇನೆಗೂ, ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದು, ಈ ಘಟನೆಯಿಂದ ಅಂತರ ಕಾಯ್ದುಕೊಳ್ಳುವ ಸ್ಪಷ್ಟ ಸೂಚನೆ ನೀಡಿದ್ದಾರೆ. ಅಲ್ಲದೆ ಬಂಧಿತರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
|