ರಾಜ್ಯದಲ್ಲಿ ಸಾವಯವ ಕೃಷಿ ಅಭಿವೃದ್ದಿಗೆ ಮುಂದಿನ ಬಜೆಟ್‌ನಲ್ಲಿ 200 ಕೋಟಿ ರೂ.ಮೀಸಲಿರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಕಟಿಸಿದ್ದಾರೆ.
ಕಳೆದ ಬಜೆಟ್‌ನಲ್ಲಿ 100 ಕೋಟಿ ರೂ. ನೀಡಲಾಗಿತ್ತು. ಈ ಸಲ ಅದನ್ನು ಇಮ್ಮಡೊಗೊಳಿಸಲಾಗುವುದು. ಆ ಮೂಲಕ ಹೆಚ್ಚಿನ ರೈತರು ಸಾವಯವ ಕೃಷಿಕರಾಗಿ ಪರಿವರ್ತನೆಯಾಗಲು ಅನುಕೂಲ ಆಗುತ್ತದೆ ಎಂದರು.
ವಿಧಾನಸೌಧ ಮುಂಭಾಗ ಸೋಮವಾರ ಕೃಷಿ ಇಲಾಖೆ, ಸಾವಯವ ಕೃಷಿ ಮಿಷನ್ ಏರ್ಪಡಿಸಿದ್ದ ಕೃಷಿ ಚೈತನ್ಯ ಸಮಾವೇಶ ಹಾಗೂ ನೇಗಿಲಯೋಗಿ ಪ್ರತಿಜ್ಞಾವಿಧಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ಎಂಟು ತಿಂಗಳ ಹಿಂದೆ ರೈತರ ಹೆಸರಿನಲ್ಲಿ ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದೆ. ಅಲ್ಲಿಂದ ಇಲ್ಲಿವರೆಗೂ ರೈತರು ಸ್ವಾವಲಂಬಿಯಾಗಿ ಮತ್ತು ಸ್ವತಂತ್ರವಾಗಿ ಬದುಕಲು ಅನುಕೂಲ ಮಾಡಿಕೊಟ್ಟಿದ್ದೇನೆ. ಅದಕ್ಕಾಗಿಯೇ ರೈತರಿಂದಲೇ ಸಾವಯವ ಕೃಷಿ ಮಿಷನ್ ಸ್ಥಾಪಿಸಲಾಗಿದ್ದು, ಅದು ಯಶಸ್ವಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಯಡಿಯೂರಪ್ಪ ಹೇಳಿದರು.
ನಾಡಿಗೆ ವಿಷ ಉಣಿಸುವುದಿಲ್ಲ, ಆಹಾರ ಉತ್ಪನ್ನಕ್ಕೆ ವಿಷ ಹಾಕುವುದಿಲ್ಲ.. ಬಿತ್ತನೆ ಬೀಜಕ್ಕೆ ಕೈ ಚಾಚುವುದಿಲ್ಲ...ಸ್ವಾವಲಂಬಿಯಾಗಿ, ಸ್ವಾಭಿಮಾನದಿಂಸ ಬದುಕುತ್ತೇನೆ.. ಹೀಗೆಂದು 30ಸಾವಿರಕ್ಕೂ ಅಧಿಕ ಸಾವಯವ ಕೃಷಿಕರು ವಿಧಾನಸೌಧದ ಮುಂದೆ ಪ್ರಮಾಣ ಮಾಡಿದರು.
ಕೃಷಿಕನ ಮನೆಗೆ ಸಿಎಂ: ತಿಂಗಳಿಗೊಮ್ಮೆ ಕೃಷಿಕನ ಮನೆಗೆ ಮುಖ್ಯಮಂತ್ರಿ ಭೇಟೊ ನೀಡಿ ಒಂದು ಗಂಟೆಗಳ ಕಾಲ ಅವರೊಂದಿಗೆ ಸಂವಾದ ನಡೆಸುತ್ತಾರೆ. ಬಾಗಲಕೋಟೆಯ ಸಾವಯವ ಕೃಷಿಕರಾದ ಮೀರಾ ತಾಯಿ ಕೊಪ್ಪಿಕರ್ ಅವರು ಈ ಸಲಹೆ ನೀಡಿದ್ದರಂತೆ. ಅದನ್ನು ಈಗ ಅನುಸರಿಸಲು ನಿರ್ಧರಿಸಿದ್ದೇನೆ ಎಂದರು. |