ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಗೊಂದು ಹೊರಗೊಂದು ನಿಲುವು ತಳೆಯಬಾರದು ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಸಲಹೆ ಮಾಡಿದರು.
ಸಿದ್ದರಾಮಯ್ಯ ಅವರಿಗೆ ಸೂಕ್ತ ಸ್ಥಾನಮಾನ ನೀಡುವುದು ಬಿಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ. ಆದರೆ ಅವರು ಒಳಗೊಂದು ಹೊರಗೊಂದು ರೀತಿ ವರ್ತಿಸಬಾರದು. ರಾಜ್ಯದ ಕಾಂಗ್ರೆಸ್ ಮುಖಂಡರು ಅವರ ವಿಷಯದಲ್ಲಿ ಯಾವುದೇ ಭಿನ್ನಾಭಿಪ್ರಾಯ ಹೊಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ. ರಾಜಕಾರಣಿಗಳಿಗೆ ತಾಳ್ಮೆ ಮುಖ್ಯ. ಇದಕ್ಕೆ ನಾನು ಉತ್ತಮ ಉದಾಹರಣೆ. ಇಷ್ಟು ವರ್ಷ ಕಾದ ಫಲವೇ ಈಗ ಸೂಕ್ತ ಸ್ಥಾನ ದೊರೆಯುವಂತಾಗಿದೆ. ಸಿದ್ದರಾಮಯ್ಯ ಅವರೊಡನೆ ನಾನೂ ದೂರವಾಣಿಯಲ್ಲಿ ಮಾತನಾಡಿದ್ದೇನೆ ಎಂದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೇವಲ ಭರವಸೆ ಬುತ್ತಿ ತೋರಿಸುತ್ತಿದ್ದಾರೆ. ಎಲ್ಲಾ ಯೋಜನೆಗಳಿಗೂ ಕೇವಲ ಅಡಿಗಲ್ಲು ಹಾಕಿ ಅಭಿವೃದ್ದಿ ಕಾರ್ಯಗಳನ್ನು ಘೋಷಣೆಯಲ್ಲೇ ಉಳಿಸಿದ್ದಾರೆ. ಆದರೆ ಹಣ ಬಿಡುಗಡೆಯಾಗುವುದಿಲ್ಲ. ಇದಕ್ಕೆ ಸರ್ಕಾರದ ಬಳಿ ಹಣವಿಲ್ಲ ಎಂಬ ಸತ್ಯವನ್ನು ಅವರೇ ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು. |