ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷ 'ಕೈ' ಬಿಡುವುದು ಬಹುತೇಕ ಖಚಿತವಾಗತೊಡಗಿದ್ದು, ಜನವರಿ 31ರಂದು ಸಿದ್ದರಾಮಯ್ಯನವರ ನೂನತ ಪಕ್ಷ ಉದಯಿಸಲಿದೆ ಎಂಬುದಾಗಿ ಅವರ ಆಪ್ತವಲಯದ ಮೂಲಗಳು ತಿಳಿಸಿವೆ.ಸಿದ್ದರಾಮಯ್ಯನವರ ಹೊಸ ಪಕ್ಷ ಜ.31ಕ್ಕೆ ಅಸ್ತಿತ್ವಕ್ಕೆ ಬರಲಿದೆ. ಅದಕ್ಕಾಗಿ ವಿವಿಧ ಪಕ್ಷದ ಸುಮಾರು 25ಶಾಸಕರು ಪರೋಕ್ಷವಾಗಿ ಬೆಂಬಲವನ್ನು ಸೂಚಿಸಿರುವುದಾಗಿ ವರ್ತೂರು ಪ್ರಕಾಶ್ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಹೇಳಿದ್ದಾರೆ.ಕಾಂಗ್ರೆಸ್‌ನಲ್ಲಿ ಸೂಕ್ತ ಸ್ಥಾನಮಾನ ನೀಡದೆ, ತಮ್ಮನ್ನು ಮೂಲೆಗುಂಪು ಮಾಡುತ್ತಿರುವ ಬಗ್ಗೆ ಅಸಮಾಧಾನಗೊಂಡಿರುವ ಸಿದ್ದರಾಮಯ್ಯನವರು ಹೊಸ ಪಕ್ಷ ಕಟ್ಟಲಿದ್ದಾರೆ ಎಂಬ ಊಹಾಪೋಹ ರಾಜ್ಯ ರಾಜಕಾರಣದಲ್ಲಿ ಹರಿದಾಡುತ್ತಿದ್ದರು ಕೂಡ, ಸಿದ್ದರಾಮಯ್ಯ ಈವರೆಗೂ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ.ಆದರೆ ಭಾನುವಾರ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಒಟ್ಟಿಗೆ ಪ್ರಯಾಣಿಸುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಅದಕ್ಕೆ ಪೂರಕ ಎಂಬಂತೆ ವರ್ತೂರು ಪ್ರಕಾಶ್ ಕೂಡ ಇದೀಗ ಜನವರಿ 31ರಂದು ನೂತನ ಪಕ್ಷ ಉದಯವಾಗಲಿದೆ ಎಂಬುದಾಗಿ ಘಂಟಾಘೋಷವಾಗಿ ಹೇಳಿಕೆ ನೀಡಿದ್ದಾರೆ.ಈ ಎಲ್ಲಾ ಬೆಳವಣಿಗೆ ಕಾಂಗ್ರೆಸ್‌ಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದ್ದು, ಸಿದ್ದರಾಮಯ್ಯನವರು ಒಳಗೊಂದು, ಹೊರಗೊಂದು ನಿಲುವು ಹೊಂದಬಾರದು ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ದೇಶಪಾಂಡೆ ಸಲಹೆಯನ್ನೂ ನೀಡಿದ್ದಾರೆ. ಸಿದ್ದರಾಮಯ್ಯನವರಿಗೆ ಸೂಕ್ತ ಸ್ಥಾನಮಾನ ನೀಡುವುದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ಅಲ್ಲದೇ ಪಕ್ಷಕ್ಕಿಂತ ವ್ಯಕ್ತಿ ದೊಡ್ಡವನಲ್ಲ ಎಂಬುದಾಗಿಯೂ ಹೇಳಿದ್ದರು. |