ಮಂಗಳೂರಿನ ಪಬ್ ಮೇಲೆ ಶ್ರೀರಾಮಸೇನೆಯ ಕಾರ್ಯಕರ್ತರು ನಡೆಸಿದ ದಾಳಿಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ, ಸಂಘಟನೆಯ ಸ್ಥಾಪಕ ಪ್ರಮೋದ್ ಮುತಾಲಿಕ್ ಮಹಾರಾಷ್ಟ್ರಕ್ಕೆ ಪರಾರಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.ಆರ್‌ಎಸ್‌ಎಸ್ ಮಾಜಿ ಸದಸ್ಯ, ಬಜರಂಗದಳದ ಮಾಜಿ ವರಿಷ್ಠ, ಹಾಲಿ ಶ್ರೀರಾಮಸೇನೆಯ ಮುಖ್ಯಸ್ಥ ಮುತಾಲಿಕ್, ಪಬ್ ಮೇಲಿನ ದಾಳಿಗೆ ಕ್ಷಮೆಯಾಚಿಸುವ ಪ್ರಶ್ನೆಯೇ ಇಲ್ಲ ಎಂದು ಸೋಮವಾರ ಮಾಧ್ಯಮವೊಂದಕ್ಕೆ ತಿಳಿಸಿದ್ದರು.ಅಲ್ಲದೇ ಸೇನೆಯ ಕಾರ್ಯಕರ್ತರು ಮಾಡಿದ ದಾಳಿಯ ಕ್ರಮ ಸರಿಯಾದದ್ದೇ ಆಗಿದೆ. ಇದೊಂದು ಸಣ್ಣ ಘಟನೆಯಾಗಿದ್ದು, ಅಶ್ಲೀಲ ವರ್ತನೆಯ ವಿರುದ್ಧ ನಮ್ಮ ದಾಳಿ ಎಂದು ಸಮಜಾಯಿಷಿಕೆ ನೀಡಿದ್ದಾರೆ.ಇದೀಗ ಪಬ್ ದಾಳಿ ಘಟನೆಗೆ ಸಂಬಂಧಿಸಿದಂತೆ ಶ್ರೀರಾಮಸೇನೆಯ 27ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮುತಾಲಿಕ್ ಅವರ ಬಂಧನಕ್ಕಾಗಿ ಬಲೆಬೀಸಿರುವ ಹುಬ್ಬಳ್ಳಿ ಪೊಲೀಸರು, ಮಹಾರಾಷ್ಟ್ರಕ್ಕೆ ತೆರಳಿರುವುದಾಗಿ ಹೇಳಿದ್ದಾರೆ.ಬಂಧನದ ಭಯದ ಹಿನ್ನೆಲೆಯಲ್ಲಿ ಪ್ರಮೋದ್ ಮುತಾಲಿಕ್ ಅವರು ಮಹಾರಾಷ್ಟ್ರಕ್ಕೆ ಪರಾರಿಯಾಗಿರುವ ಕುರಿತು ಮಾಹಿತಿ ಲಭಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಮಂಗಳೂರಿನ ಪಬ್ ಮೇಲೆ ನಡೆದ ದಾಳಿಗೆ ಸಾರ್ವಜನಿಕವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಘಟನೆ ಕುರಿತಂತೆ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. |