ಮಂಗಳೂರಿನ ಪಬ್ ಮೇಲಿನ ದಾಳಿ ಪ್ರಕರಣ ರಾಜಕೀಯ ಬಣ್ಣ ಪಡೆಯುತ್ತಿದ್ದರೆ, ದಾವಣಗೆರೆಯಲ್ಲಿ ಪ್ರಚೋದನಕಾರಿ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಅವರನ್ನು ಬೆಳಗಾವಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬಳಿಕ ಪೊಲೀಸರು ಬಂಧಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಮಂಗಳೂರಿಗೆ ಭೇಟಿ ನೀಡಿದ್ದ ಡಿಜಿಪಿ ಶ್ರೀಕುಮಾರ್ ಅವರು, ಪಬ್ ದಾಳಿಯ ಹಿಂದೆ ಪ್ರಮೋದ್ ಮುತಾಲಿಕ್ ಅವರ ಕೈವಾಡ ಇಲ್ಲ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ, ಬೆಳಗಾವಿಯಲ್ಲಿ ಮುತಾಲಿಕ್ ಅವರನ್ನು ಬಂಧಿಸಿರುವ ಬಗ್ಗೆ ಖಾರವಾಗಿ ಪ್ರಶ್ನಿಸಿದ್ದಾರೆ. ತನ್ನನ್ನು ಯಾಕಾಗಿ ಬಂಧಿಸಿದ್ದಾರೆ ಎನ್ನುವುದು ತನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.ಮುತಾಲಿಕ್ ಅವರನ್ನು ದಾವಣಗೆರೆ ಹಾಗೂ ರಾಜ್ಯದ ಇತರೆಡೆ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಬಂಧಿಸಿರುವುದಾಗಿ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ್ ಹೇಳಿದ್ದಾರೆ.ಮಂಗಳೂರಿನ ಘಟನೆ ಕುರಿತಂತೆ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಮುತಾಲಿಕ್ ಅವರನ್ನು ಬಂಧಿಸಿ, ವಿಚಾರಣೆಗಾಗಿ ಕರೆದೊಯ್ಯುತ್ತಿರುವುದಾಗಿ ಪೊಲೀಸರು ತಿಳಿಸಿರುವುದಾಗಿ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.ಪಬ್‌ನಲ್ಲಿ ಸೇನೆಯ ಕಾರ್ಯಕರ್ತರು ಗೂಂಡಾವರ್ತನೆ ತೋರಿಸಿದ್ದರೆ ಅದಕ್ಕೆ ತಾನು ಕ್ಷಮಾಪಣೆ ಕೇಳುವುದಾಗಿ ಬಂಧನಕ್ಕೀಡಾಗುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಅಲ್ಲದೇ ಪಬ್ ಸಂಸ್ಕೃತಿ ವಿರುದ್ಧ ತಮ್ಮ ಹೋರಾಟ ನಿಲ್ಲದು ಎಂಬುದಾಗಿಯೂ ಸ್ಪಷ್ಟಪಡಿಸಿದ್ದರು. ಪಬ್ ದಾಳಿಯಲ್ಲಿ ಹಲ್ಲೆಗೊಳಗಾದ ಯುವತಿಯರು ನನ್ನ ಸಹೋದರಿಯದ್ದ ಹಾಗೇ, ಅವರಿಗೆ ಏನಾದರು ನೋವಾಗಿದ್ದರೆ ಆ ಬಗ್ಗೆ ತಾನು ಕ್ಷಮೆ ಕೇಳಲು ಸಿದ್ದ ಎಂಬುದಾಗಿಯೂ ಹೇಳಿಕೆ ನೀಡಿದ್ದಾರೆ. ಪಬ್ ಮೇಲಿನ ದಾಳಿಯ ಸಂದರ್ಭದಲ್ಲಿ ಯುವತಿಯರ ಮೇಲೆ ದೌರ್ಜನ್ಯ ನಡೆಸಿಲ್ಲ ಎಂದು ಹೇಳಿದ್ದಾರೆ.ತಮ್ಮ ಬಂಧನವಾಗುತ್ತದೆ ಎಂಬ ಭಯದಿಂದ ಮುತಾಲಿಕ್ ಅವರು ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿದ್ದವು. ಆದರೆ ತಾನು ಪರಾರಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿರುವ ಅವರು, ಬಹುಭಾಷಿಗರ ಸಮ್ಮೇಳನದ ಇದ್ದಿರುವ ಕಾರಣ ಅದರಲ್ಲಿ ಭಾಗವಹಿಸಿದ್ದೇನೆ ಹೊರತು, ಯಾವುದೇ ಪ್ರಕರಣಕ್ಕೆ ಹೆದರಿ ಭೂಗತನಾಗಿಲ್ಲ ಎಂದು ತಿಳಿಸಿದ್ದಾರೆ. |