ಇನ್ನೇನು ಕಾರ್ಯಕ್ರಮ ಮುಗಿಸಿ ಹೊರಡಬೇಕು ಎಂಬಷ್ಟರಲ್ಲಿ ಪತ್ರಕರ್ತರ ಸಮೂಹದಿಂದ ತೂರಿಬಂದ ಪ್ರಶ್ನೆಯೊಂದಕ್ಕೆ ಉತ್ತರಿಸುವ ಭರದಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜ್‌ನಾಥ್ ಸಿಂಗ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕೈಯನ್ನು ಜಗ್ಗಿ, ಬೈಠೋಜಿ (ಕುಳಿತುಕೊಳ್ಳಿ) ಎಂದಾಗ ತಟ್ಟನೆ ಕುಳಿತುಕೊಳ್ಳಲು ಹೋಗಿ ನೆಲಕ್ಕುರುಳಿದ ಪ್ರಸಂಗ ಮಂಗಳವಾರ ನಡೆದಿತ್ತು.
ಘಟನೆ ವಿವರ: ಮಂಗಳೂರು ಪಬ್ ಘಟನೆ ಕುರಿತಂತೆ ನಗರಕ್ಕೆ ಆಗಮಿಸಿದ್ದ ರಾಜ್‌ನಾಥ್ ಸಿಂಗ್ ಹೋಟೆಲೊಂದರಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಿದ್ದರು. ಗೋಷ್ಠಿ ಮುಗಿದು ಹೊರಡಬೇಕೆನ್ನುತ್ತಿದ್ದಂತೆಯೇ, ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರ ನೀಡುವ ಸಲುವಾಗಿ, ಯಡಿಯೂರಪ್ಪ ಅವರ ಕೈಹಿಡಿದು ಕುಳಿತುಕೊಳ್ಳಿ ಎಂದಾಗ, ಅವರು ಕುರ್ಚಿಯಲ್ಲಿ ಆಸೀನರಾಗಲು ಕುಳಿತಾಗ ಕುರ್ಚಿ ಇಲ್ಲದ ಪರಿಣಾಮ ಅವರು ನೆಲಕ್ಕೆ ಬೀಳುವಂತಾಗಿತ್ತು.
ಕಾರಣ, ಮುಖ್ಯಮಂತ್ರಿಗಳು ಹೊರಡುತ್ತಿದ್ದಾರೆಂದು ಗಮನಿಸಿದ ಅಂಗರಕ್ಷಕ ಅವರು ಕುಳಿತಿದ್ದ ಕುರ್ಚಿಯನ್ನು ಹಿಂದಕ್ಕೆ ಎಳೆದಿಟ್ಟಿದ್ದ, ಆ ಸಂದರ್ಭಕ್ಕೆ ರಾಜ್‌ನಾಥ್ ಸಿಂಗ್ ಕೈ ಹಿಡಿದು ಕುಳಿತುಕೊಳ್ಳಿ ಎನ್ನುವುದಕ್ಕೂ, ಮುಖ್ಯಮಂತ್ರಿಗಳು ಕುಳಿತುಕೊಂಡಿದ್ದು ಏಕಕಾಲಕ್ಕೆ ಸಂಭವಿಸಿದ ಪರಿಣಾಮ ಮುಖ್ಯಮಂತ್ರಿಗಳು ನೆಲಕ್ಕೆ ಕುಸಿದಿದ್ದರು. ಆಗ ರಾಜನಾಥ್ ಸಿಂಗ್ ಹಾಗೂ ಅಂಗರಕ್ಷಕರು ಹಿಡಿದು ಮೇಲೆತ್ತಿದ್ದರು. |