ನಾವು ಮಾಡುತ್ತಿರುವ ಕೆಲಸಗಳಿಗೆಲ್ಲಾ ಆಕ್ಷೇಪ ಎತ್ತುವುದೇ ಬುದ್ದಿಜೀವಿಗಳ ಕೆಲಸವಾಗಿದೆ. ಅವರ ಮಾತು ಕೇಳುತ್ತಾ ಹೋದರೆ ಆಡಳಿತ ನಡೆಸುವುದಕ್ಕೆ ಸಾಧ್ಯವಿಲ್ಲ. ವಿರೋಧ ವ್ಯಕ್ತಪಡಿಸುವವರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮುಜರಾಯಿ ಮತ್ತು ವಸತಿ ಖಾತೆ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ತಿಳಿಸಿದ್ದಾರೆ.
ಸೂರ್ಯ ಗ್ರಹಣ ದೋಷ ಪರಿಹಾರಕ್ಕಾಗಿ ಜಪ, ಹವನ ನಡೆಸುವಂತೆ ಮುಜರಾಯಿ ಇಲಾಖೆಗೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ಮೃತ್ಯುಂಜಯ ಜಪ, ಹವನ, ಉದಕ ಶಾಂತಿ ಪಠನ ಮತ್ತು ನಕ್ಷತ್ರ ಹವನದೊಂದಿಗೆ ಗ್ರಹಣ ಶಾಂತಿ ಮಾಡುವಂತೆ ಆದೇಶಿಸಿದ್ದ ತಮ್ಮ ಕ್ರಮಕ್ಕೆ ಬುದ್ದಿಜೀವಿಗಳು ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಪ್ರತಿಕ್ರಿಯಿಸಿ ಕೋಲಾರದ ಕಾರ್ಯಕ್ರಮವೊಂದರ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ರಾಜ್ಯ ಮತ್ತು ಪ್ರಜೆಗಳ ಹಿತಕ್ಕಾಗಿ ಈ ಆದೇಶ ಜಾರಿ ಮಾಡಿದ್ದೇನೆ. ಬಹುಸಂಖ್ಯಾತ ಹಿಂದೂಗಳು ಇದನ್ನು ಅಪೇಕ್ಷಿಸಿದ್ದರು ಇದನ್ನು ಅರಿತು ಕೆಲಸ ಮಾಡಿದ್ದೇನೆ. ಅಲ್ಪಸಂಖ್ಯಾತರ ನಂಬಿಕೆಯಂತೆ ದರ್ಗಾ ಮತ್ತು ಮಸೀದಿಗಳಲ್ಲಿ ಯಾವುದಾದರೂ ಪೂಜೆಗಳನ್ನು ಸಂಬಂಧಪಟ್ಟ ಸಚಿವರು ನಡೆಸಲಿ. ನಾವು ಯಾವತ್ತೂ ಒಂದು ವರ್ಗದ ಓಲೈಕೆಗಾಗಿ ಇಂತಹ ಕೆಲಸ ಮಾಡುತ್ತಿಲ್ಲ ಎಂದು ಸಮರ್ಥನೆ ನೀಡಿದ್ದಾರೆ. |