ಪ್ರಚೋದನಾಕಾರಿ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಬಂಧನಕ್ಕೊಳಗಾಗಿದ್ದ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್‌ಗೆ ದಾವಣಗೆರೆ ಜೆಎಂಎಫ್ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿದೆ.ಮಂಗಳೂರಿನ ಎಮ್ಮೇಶಿಯ ಪಬ್ ದಾಳಿ ಪ್ರಕರಣ ರಾಷ್ಟ್ರವ್ಯಾಪಿ ಟೀಕೆಗೆ ಒಳಗಾಗಿದ್ದು, ರಾಜಕೀಯ ತಿರುವು ಪಡೆಯುತ್ತಿದ್ದ ಸಂದರ್ಭದಲ್ಲಿಯೇ, ಶ್ರೀರಾಮ ಸೇನೆಯ ಮುಖ್ಯಸ್ಥ ಮುತಾಲಿಕ್ ಅವರನ್ನು ನಿನ್ನೆ ಬೆಳಗಾವಿಯಲ್ಲಿ ಪೊಲೀಸರು ಬಂಧಿಸಿದ್ದರು. ಆದರೆ ಅವರನ್ನು ಪಬ್ ದಾಳಿ ಪ್ರಕರಣಕ್ಕೆ ಬಂಧಿಸಿಲ್ಲ, ಈ ಹಿಂದೆ ದಾವಣಗೆರೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿರುವುದಾಗಿ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ ಸ್ಪಷ್ಟಪಡಿಸಿದ್ದರು.ಬಳಿಕ ಮುತಾಲಿಕ್ ಅವರನ್ನು ದಾವಣಗೆರೆ ಪೊಲೀಸರ ವಶಕ್ಕೆ ಒಪ್ಪಿಸಲಾಗಿದ್ದು, ಬುಧವಾರ ಅವರನ್ನು ಸ್ಥಳೀಯ ಜೆಎಂಎಫ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 25 ಸಾವಿರ ರೂ.ಭದ್ರತೆ ಹಾಗೂ ಷರತ್ತು ಬದ್ದ ಜಾಮೀನಿನ ಮೇಲೆ ನ್ಯಾಯಾಧೀಶರು ಬಿಡುಗಡೆಗೊಳಿಸಿದ್ದಾರೆ. ಅಲ್ಲದೇ ಸಾಕ್ಷ್ಯಾಧಾರಗಳನ್ನು ನಾಶಪಡಿಸದೆ, ಎಲ್ಲಾ ರೀತಿಯಿಂದಲೂ ತನಿಖೆಗೆ ಸಹಕರಿಸಬೇಕು ಎಂದು ನಿರ್ದೇಶನ ನೀಡಿದೆ.ಮುತಾಲಿಕ್ ತನಿಖೆಯ ವೇಳೆ ನ್ಯಾಯಾಲಯದ ಸುತ್ತ-ಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಏರ್ಪಡಿಸಲಾಗಿದ್ದು, ಇದೀಗ ದಾವಣಗೆರೆ ನ್ಯಾಯಾಲಯ ಜಾಮೀನು ನೀಡಿದz.ಮುತಾಲಿಕ್ ಮರು ಬಂಧನವಾಗಿಲ್ಲ: ದಾವಣಗೆರೆ ಸತ್ರ ನ್ಯಾಯಾಲಯದಿಂದ ಮುತಾಲಿಕ್ ಅವರಿಗೆ ಜಾಮೀನು ದೊರೆತ ಕೂಡಲೇ, ಮಂಗಳೂರು ಪೊಲೀಸರು ಬಂಧಿಸಿದ್ದಾರೆಂಬ ವರದಿ ಸುಳ್ಳು ಎಂದು ಅವರ ವಕೀಲ ರೇವಣ್ಣ ಅವರು ಸ್ಪಷ್ಟನೆ ನೀಡಿದ್ದಾರೆ.ಏತನ್ಮಧ್ಯೆ ಮಂಗಳೂರು ಪಬ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮುತಾಲಿಕ್ ವಿರುದ್ದ ವಾರೆಂಟ್ ಜಾರಿ ಮಾಡಿದ್ದು, ನಾಳೆ ಬಂಧಿಸುವ ಸಾಧ್ಯತೆ ಇರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. |