ಮಂಗಳೂರು ಘಟನೆಯನ್ನು ರಾಜಕೀಯಗೊಳಿಸುತ್ತಿರುವ ಪ್ರತಿಪಕ್ಷಗಳಿಗೆ ತಲೆ ಕೆಟ್ಟಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಿಡಿಕಾರಿದ್ದಾರೆ.
ನಗರದ ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ಬುಧವಾರ ಕರ್ನಾಟಕ ಮಧುಮೇಹ ಸಂಸ್ಥೆಯನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರು ಪಬ್ ದಾಳಿ ಘಟನೆಯನ್ನು ಪ್ರತಿಪಕ್ಷಗಳು ವಿನಾಕಾರಣ ರಾಜಕೀಯ ದಾಳವಾಗಿ ಬಳಿಸಿಕೊಳ್ಳುತ್ತಿವೆ ಎಂದು ಗಂಭೀರವಾಗಿ ಆರೋಪಿಸಿದರು.
ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಶ್ರೀರಾಮಸೇನೆಯ ಹಲವರನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಮಂಗಳವಾರ ರಾತ್ರಿ ಸೇನೆಯ ವರಿಷ್ಠ ಮುತಾಲಿಕ್ ಅವರನ್ನು ಬಂಧಿಸಲಾಗಿದೆ. ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆಯೂ ಸುಸ್ಥಿತಿಯಲ್ಲಿದೆ.
ಸರ್ಕಾರ ಎಲ್ಲಾ ರೀತಿಯ ಕ್ರಮ ಕೈಗೊಂಡರೂ ಪ್ರತಿಪಕ್ಷಗಳು ವಿನಾಕಾರಣ ಒಂದೇ ದಿಕ್ಕಿನಲ್ಲಿ ಹರಿಹಾಯುವ ಮೂಲಕ ವಿಷಯವನ್ನು ರಾಜಕೀಯಗೊಳಿಸುತ್ತಿವೆ ಎಂದು ಹೇಳಿದರು. |