ತೀವ್ರ ಚರ್ಚೆಗೆ ಗ್ರಾಸವಾಗಿರುವ ಮಂಗಳೂರು ಪಬ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರನ್ನು ಮಂಗಳೂರು ಪೊಲೀಸರು ಬುಧವಾರ ರಾತ್ರಿ ಮತ್ತೆ ವಶಕ್ಕೆ ತೆಗೆದುಕೊಂಡಿದ್ದಾರೆ.
ದಾವಣಗೆರೆ ಕೋರ್ಟ್ ಬುಧವಾರ ಮುತಾಲಿಕ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿತ್ತಾದರೂ, ಬಾಡಿ ವಾರಂಟ್ ಪಡೆದ ಮಂಗಳೂರು ಪೊಲೀಸರು ಬುಧವಾರ ರಾತ್ರಿ ದಾವಣಗೆರೆಯಲ್ಲಿ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಶುಕ್ರವಾರ ಸಂಜೆ ಮಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮುತಾಲಿಕ್ ಅವರನ್ನು ಹಾಜರುಪಡಿಸಿದ್ದು, ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಶುಕ್ರವಾರದವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಇದೇ ವೇಳೆ ಮುತಾಲಿಕ್ ಅವರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡದಿದ್ದರೆ ನಂತರ ನಡೆಯುವ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗುತ್ತದೆ ಎಂದು ಶ್ರೀರಾಮ ಸೇನೆ ಎಚ್ಚರಿಕೆ ನೀಡಿದೆ. ಹುಬ್ಬಳ್ಳಿಯ ಎಲ್ಲ ಪಬ್ಗಳ ಮೇಲೆ ಹಾಗೂ ಮುಂಡಗೋಡಿನ ಟಿಬೆಟಿಯನ್ ಶಿಬಿರದ ಮೇಲೂ ದಾಳಿ ನಡೆಸುವುದಾಗಿ ಅದು ಮುನ್ನೆಚ್ಚರಿಕೆ ಕೊಟ್ಟಿದೆ. |