ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ನಾಯಕರ ಮಕ್ಕಳಿಗೆ ಟಿಕೆಟ್ ನೀಡದಿರಲು ಭಾರತೀಯ ಜನತಾ ಪಕ್ಷದ ವರಿಷ್ಠ ಮಂಡಳಿ ನಿರ್ಧರಿಸಿದೆ.
ಬಿಜೆಪಿ ನಡೆಸಿದ ಚುನಾವಣಾ ಸಮಿತಿ ಸಭೆಯಲ್ಲಿ ಈ ಬಗ್ಗೆ ತಲೆದೋರಿದ್ದ ಸಮಸ್ಯೆಗೆ ಈ ಪರಿಹಾರವನ್ನು ಕಂಡುಕೊಂಡಿದೆ. ಯಾವುದೇ ಕಾರಣಕ್ಕೆ ಪಕ್ಷದಲ್ಲಿರುವ ಮುಖಂಡರ ಪುತ್ರರಿಗೆ ಟಿಕೆಟ್ ನೀಡಬಾರದು ಎಂದು ವರಿಷ್ಠ ಮಂಡಳಿ ಸೂಚಿಸಿದ್ದೆ ಈ ನಿರ್ಧಾರಕ್ಕೆ ಕಾರಣ ಎಂದು ತಿಳಿದು ಬಂದಿದೆ.
ಅಲ್ಲದೆ, ಸಂಘ ಪರಿವಾರ ಸಹ ಯಾವುದೇ ಕಾರಣಕ್ಕೆ ಮಂತ್ರಿಗಳು, ಶಾಸಕರ ಮಕ್ಕಳಿಗೆ ಚುನಾವಣೆಯಲ್ಲಿ ಟಿಕೆಟ್ ನೀಡದಿರುವಂತೆ ಸ್ಪಷ್ಟವಾಗಿ ಸೂಚನೆ ನೀಡಿದೆ.
ಇದೇ ವೇಳೆ ತಮ್ಮ ಪುತ್ರನನ್ನು ಚುನಾವಣೆಗೆ ನಿಲ್ಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಪಕ್ಷದ ನಿರ್ಣಯಕ್ಕೆ ತಾನು ತಲೆಬಾಗಿರುವುದಾಗಿ ಅವರು ಹೇಳಿದ್ದಾರೆ. ಈ ನಿಟ್ಟಿನಲ್ಲಿ ಮಂಗಳೂರು ಕ್ಷೇತ್ರದ ಬದಲಿಗೆ ಉಡುಪಿಯಿಂದ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಸ್ಪರ್ಧಿಸಲಿದ್ದಾರೆ. ಮಂಗಳೂರಿನಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. |