ಕೆಜಿಎಫ್ ಕ್ಷೇತ್ರದ ಬಿಜೆಪಿ ಶಾಸಕ ವೈ.ಸಂಪಂಗಿ ಅವರು ಶಾಸಕರ ಭವನದಲ್ಲಿ ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತರ ಬಲೆಗೆ ಬಿದ್ದ ಘಟನೆ ಗುರುವಾರ ನಡೆದಿದೆ.
ಕೋಲಾರದಲ್ಲಿ ಭೂ ವ್ಯಾಜ್ಯವೊಂದಕ್ಕೆ ಸಂಬಂಧಿಸಿದಂತೆ ಹುಸೈನ್ ಫಾರೂಕ್ ಎಂಬವರ ಮೇಲೆ ಸ್ಥಳೀಯ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿತ್ತು. ದೂರಿನ ಕುರಿತು ಠಾಣೆಗೆ ಹೋದ ಸಂದರ್ಭದಲ್ಲಿ ಸಬ್ ಇನ್ಸ್‌ಪೆಕ್ಟರ್ ಪಾಷಾ ಮತ್ತು ಇನ್ಸ್‌ಪೆಕ್ಟರ್ ನಿಮ್ಮ ಪ್ರಕರಣ ಇತ್ಯರ್ಥವಾಗಬೇಕಿದ್ದರೆ ಶಾಸಕರನ್ನು ಭೇಟಿಯಾಗಿ ಎಂದು ತಿಳಿಸಿದ್ದರು.
ಬಳಿಕ ಕೆಜಿಎಫ್ ಶಾಸಕ ವೈ.ಸಂಪಂಗಿಯನ್ನು ಭೇಟಿಯಾದಾಗ, ಕ್ರಿಮಿನಲ್ ಮೊಕದ್ದಮೆ ಮುಚ್ಚಿ ಹಾಕಿ, ಬಿ ರಿಪೋರ್ಟ್ ಹಾಕಿಸುತ್ತೇನೆ. ಐದು ಲಕ್ಷ ರೂ.ಲಂಚ ನೀಡಬೇಕು ಎಂದು ಫಾರೂಕ್ ಅವರಿಗೆ ಬೇಡಿಕೆ ಇಟ್ಟಿರುವುದಾಗಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.
ಆಡಳಿತರೂಢ ಸರ್ಕಾರದ ಹಾಲಿ ಶಾಸಕರನ್ನು ಬಂಧಿಸಿರುವುದು ಲೋಕಾಯುಕ್ತದ ಇತಿಹಾಸದಲ್ಲೇ ಪ್ರಥಮ ಬಾರಿಯದ್ದಾಗಿದೆ. ಶಾಸಕರ ಭವನದಲ್ಲಿ ಫಾರೂಕ್ ಅವರು 50ಸಾವಿರ ರೂಪಾಯಿ ನಗದು ಹಣ ನೀಡಿ, ಉಳಿದ 4.5ಲಕ್ಷ ರೂ.ಗಳ ಚೆಕ್ ನೀಡುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದರು.
ಆದರೆ ತನ್ನಲ್ಲಿ 50ಸಾವಿರ ಮಾತ್ರ ನಗದು ಇರುವುದಾಗಿ ಫಾರೂಕ್ ಹೇಳಿದಾಗ, ತೊಂದರೆ ಇಲ್ಲ ಉಳಿದ 4.5ಲಕ್ಷಕ್ಕೆ ಸೆಲ್ಪ್ ಚೆಕ್ ನೀಡುವಂತೆಯೂ ಸಂಪಂಗಿ ಸಲಹೆ ನೀಡಿದ್ದರು. ಆದರೆ ಈ ಎಲ್ಲಾ ಮಾತುಕತೆಗಳನ್ನು ಫಾರೂಕ್ ತಮ್ಮ ಸೆಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದರು.
ಬಳಿಕ ಘಟನೆ ಕುರಿತು ಲೋಕಾಯುಕ್ತಕ್ಕೆ ವಿವರಣೆ ನೀಡಿದಾಗ, ಲೋಕಾಯುಕ್ತರು ನೀಡಿದ ನಿರ್ದೇಶನದಂತೆ, ಗುರುವಾರ ಶಾಸಕರ ಭವನದಲ್ಲಿ ಸಂಪಂಗಿ 50ಸಾವಿರ ರೂ.ಲಂಚ ಸ್ವೀಕರಿಸುತ್ತಿದ್ದಾಗಲೇ ಲೋಕಾಯುಕ್ತರು ರೆಡ್ ಹ್ಯಾಂಡ್ ಆಗಿ ಸೆರೆಹಿಡಿದಿದ್ದರು.
ಬಂಧಿತ ಸಂಪಂಗಿ ಅವರನ್ನು ಲೋಕಾಯುಕ್ತರು ವಿಶೇಷ ನ್ಯಾಯಾಧೀಶ ಎಂ.ಆರ್.ಶೆಟ್ಟರ್ ಮುಂದೆ ಹಾಜರುಪಡಿಸಿದ್ದು, ವಿಚಾರಣೆ ನಡೆಸಿದ ಅವರು ನಾಳೆಯವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಸಂಪಂಗಿ ಸಸ್ಪೆಂಡ್: ಲಂಚ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿಯೇ ಲೋಕಾಯುಕ್ತಕ್ಕೆ ಸೆರೆಸಿಕ್ಕಿರುವ ಬಿಜೆಪಿ ಶಾಸಕ ವೈ.ಸಂಪಂಗಿಯನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಸಂಪಂಗಿ ಅಮಾನುತು ಆದೇಶವನ್ನು ತಕ್ಷಣವೇ ಕಳುಹಿಸಲಾಗುವುದು ಅಲ್ಲದೇ ಲೋಕಾಯುಕ್ತ ತನಿಖೆಗೆ ಎಲ್ಲ ರೀತಿಯಿಂದಲೂ ಸಹಕರಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
|