ಕೆಜಿಎಫ್‌ನ ಬಿಜೆಪಿ ಶಾಸಕ ವೈ.ಸಂಪಂಗಿ ಶಾಸಕರ ಭವನದಲ್ಲಿ ಲಂಚ ಸ್ವೀಕರಿಸುತ್ತದ್ದ ಸಂದರ್ಭದಲ್ಲಿ ಲೋಕಾಯುಕ್ತರ ಅತಿಥಿಯಾಗಿರುವ ಘಟನೆ ಕುರಿತಂತೆ ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ.ಲೋಕಾಯುಕ್ತ ದಾಳಿಯಲ್ಲಿ ಸೆರೆಸಿಕ್ಕಿರುವ ಶಾಸಕರ ವಿರುದ್ಧ ನೀಡಿರುವ ಪ್ರತಿಕ್ರಿಯೆ ಇಲ್ಲಿದೆ. ಎಚ್.ಡಿ.ದೇವೇಗೌಡ: ರಾಜ್ಯದಲ್ಲಿ ಭ್ರಷ್ಟಾ ರಾಜಕಾರಣ ನಡೆಯುತ್ತಿರುವ ಈ ಸಂದರ್ಭದಲ್ಲಿ ಲೋಕಾಯುಕ್ತರು ಮಾಡಿದ ಕೆಲಸ ಅಭಿನಂದನಾರ್ಹವಾದದ್ದು. ತತ್ವ ಸಿದ್ದಾಂತಗಳ ಪಕ್ಷ ಎಂದೆಲ್ಲ ಹೇಳುತ್ತಿರುವ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಿಂದ ಯಾವಾಗ ಕೆಳಗಿಳಿಯುತ್ತದೋ ಆಗ ರಾಜ್ಯಕ್ಕೆ ಅಂಟಿದ ಶಾಪ ವಿಮೋಚನೆಯಾಗುತ್ತದೆ. ಜನರಿಗೆ ರಾಜಕಾರಣಿಗಳ ಮೇಲೆ ಮೂರು ಕಾಸಿನ ಬೆಲೆ ಇಲ್ಲದಂತಾಗಿದೆ. ಈ ಸಂದರ್ಭದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ: ನಾವೇನು ಹೇಳಲು ಸಾಧ್ಯ, ನಮ್ಮ ಕಾರ್ಯದ ಬಗ್ಗೆ ಜನರೇ ಹೇಳಬೇಕು. ಭ್ರಷ್ಟಾಚಾರ ಯಾವ ಮಟ್ಟದಲ್ಲಿ ಬೆಳೆದಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅಲ್ಲದೇ ಇನ್ನು ಮುಂದಿನ ದಿನಗಳಲ್ಲೂ ದೂರು ಬಂದಲ್ಲಿ ಅಧಿಕಾರಿಗಳಿರಲಿ, ಶಾಸಕರಿಲಿ ಭ್ರಷ್ಟರ ಬೇಟೆ ಮುಂದುವರಿಯಲಿದೆ.ಎಂ.ಸಿ.ನಾಣಯ್ಯ: ಶಾಸಕರು ಖರೀದಿಯ ವಸ್ತುಗಳಾಗಿ ಬಿಟ್ಟಿದ್ದಾರೆ. ಲೋಕಾಯುಕ್ತರು ದಾಳಿ ನಡೆಸುವ ಮೂಲಕ ಭ್ರಷ್ಟ ರಾಜಕಾರಣಿಯ ಮುಖವಾಡ ಜನರ ಮುಂದೆ ಬಯಲಾಗಿದೆ. ಈ ಮೊದಲೇ ನಾನು ಹೇಳುತ್ತಲೇ ಬಂದಿದ್ದೇನೆ...ಮುಖ್ಯಮಂತ್ರಿಗಳ ಕಚೇರಿಯೇ ಭ್ರಷ್ಟಾಚಾರದ ಅಡ್ಡೆಯಾಗಿದೆ ಎಂಬುದನ್ನು, ಇದೀಗ ಶಾಸಕರ ಭವನದ ಸರದಿ. ಇದಕ್ಕೆ ಕಡಿವಾಣ ಹಾಕಲೇಬೇಕು. ಎಚ್.ಡಿ.ಕುಮಾರಸ್ವಾಮಿ: ಲೋಕಾಯುಕ್ತರಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂದು ನನ್ನ ಅಧಿಕಾರದ ಅವಧಿಯಲ್ಲಿ ನಿರ್ಧರಿಸಲಾಗಿತ್ತು. ಆದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಿಲ್ಲ. ಆದರೂ ಲೋಕಾಯುಕ್ತರು ನಡೆಸಿದ ಈ ಕಾರ್ಯಾಚರಣೆ ಶ್ಲಾಘನೀಯ. ಲೋಕಾಯುಕ್ತಕ್ಕೆ ಮತ್ತಷ್ಟು ಬಲನೀಡಬೇಕಾದ ಅಗತ್ಯವಿದೆ. ಶಾಸಕ ಸಂಪಂಗಿಯನ್ನು ಕೂಡಲೇ ವಜಾಗೊಳಿಸಬೇಕು. ಡಿ.ಕೆ.ಶಿವಕುಮಾರ್: ಇದು ಶಾಸಕರೆಲ್ಲರೂ ತಲೆತಗ್ಗಿಸುವ ವಿಚಾರ. ಭ್ರಷ್ಟಾಚಾರ ಆರೋಪದಲ್ಲಿ ಬಿಜೆಪಿ ಶಾಸಕ ಸೆರೆಸಿಕ್ಕಿರುವ ಹಿನ್ನೆಲೆಯಲ್ಲಿ ಬಿಜೆಪಿಯೇ ಇದರ ನೈತಿಕ ಹೊಣೆ ಹೊರಬೇಕು. ಲಂಚಕ್ಕೆ ಶಾಸಕರ ಭವನ ಬಳಕೆ ಮಾಡಿರುವುದು ನಾಚಿಕೆಗೇಡಿನ ವಿಷಯ. |