ಬಿಜೆಪಿ ಶಾಸಕ ಸಂಪಂಗಿಯನ್ನು ಭ್ರಷ್ಟಾಚಾರ ಆರೋಪದಲ್ಲಿ ಬಂಧಿಸಿದ ವಿಷಯ ಮಾಧ್ಯಮಗಳಲ್ಲಿ ಬಹಿರಂಗಗೊಳ್ಳುತ್ತಿದ್ದಂತೆಯೇ, ಬಾಗೇಪಲ್ಲಿ ಶಾಸಕರಾದ ಎನ್.ಸಂಪಂಗಿ ಮುಜುಗರಕ್ಕೀಡಾದ ಪ್ರಸಂಗ ಗುರುವಾರ ನಡೆಯಿತು.
ಘಟನೆಯ ವಿವರ: ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದವರು ಕೆಜಿಎಫ್ ಶಾಸಕ ವೈ.ಸಂಪಂಗಿ, ಆದರೆ ಅದೇ ಹೆಸರಿನ ಮತ್ತೊಬ್ಬ ಶಾಸಕರಿದ್ದಾರೆ ಅವರು ಬಾಗೇಪಲ್ಲಿಯ ಎನ್.ಸಂಪಂಗಿ !
ಮಾಧ್ಯಮಗಳಲ್ಲಿ ಸಂಪಂಗಿ ಬಂಧನ ಎಂದು ಬಿತ್ತವಾಗುತ್ತಿದ್ದಂತೆಯೇ ಮಾಧ್ಯಮವೊಂದರ ಜತೆ ಮಾತನಾಡಿದ ಅವರು, ತಾವು ದಯವಿಟ್ಟು ಕೆಜಿಎಫ್ ಶಾಸಕ ವೈ.ಸಂಪಂಗಿ ಅಂತ ಹಾಕಿ, ಇಲ್ಲದಿದ್ದರೆ ಅವರೋ..ನಾನೋ ಎಂಬ ಗೊಂದಲ ಮೂಡುತ್ತದೆ. ಯಾಕೆಂದರೆ ಮೊನ್ನೆ ಬಸ್ ಡ್ರೈವರ್ ಮೇಲೆ ಸಂಪಂಗಿ ಹಲ್ಲೆ ಅಂತ ಬಂದಿತ್ತು, ಅಲ್ಲದೇ ಮತ್ತೊಂದು ಘಟನೆಯಲ್ಲಿ ಪತ್ರಿಕೆಯೊಂದರಲ್ಲಿ ನನ್ನ ಫೋಟೋವನ್ನೇ ಹಾಕಿ ತೀವ್ರ ಮುಜುಗರಕ್ಕೀಡಾಗುವಂತೆ ಮಾಡಲಾಗಿದೆ ಎಂದು ತಮ್ಮ ತೊಳಲಾಟವನ್ನು ತೋಡಿಕೊಂಡರು.
ಒಟ್ಟಿನಲ್ಲಿ ಈಗಾಗಲೇ ಆಗಿರುವ ಹಲವಾರು ಘಟನೆಗಳಲ್ಲಿ ತಾನು ಮುಜುಗರಕ್ಕೀಡಾಗಿರುವುದಾಗಿ ತಿಳಿಸಿದ ಬಾಗೇಪಲ್ಲಿ ಶಾಸಕ ಸಂಪಂಗಿ, ಕೆಜಿಎಫ್ ಶಾಸಕ ಎಂದೇ ಹೇಳಿ ಮಾಧ್ಯಮದವರಿಗೆ ಸಲಹೆಯನ್ನೂ ನೀಡಿದರು. |