ಇಲ್ಲಿಗೆ ಸಮೀಪದ ಗುರುಪುರದ ಕೈಕಂಬದಲ್ಲಿ ಪೊಲೀಸರು ಮತ್ತು ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು ಈ ವೇಳೆ ಓರ್ವ ದುಷ್ಕರ್ಮಿ ಗುಂಡಿಗೆ ಬಲಿಯಾಗಿರುವ ಘಟನೆ ಶುಕ್ರವಾರ ನಸುಕಿನಲ್ಲಿ ಸಂಭವಿಸಿದೆ.
ಮುಲ್ಕಿಯಿಂದ ವೇಗವಾಗಿ ಬರುತ್ತಿದ್ದ ಕಾರನ್ನು ಪೊಲೀಸರು ತಡೆಯಲು ಯತ್ನಿಸಿದರೂ ನಿಲ್ಲದ ದುಷ್ಕರ್ಮಿಗಳು ಪರಾರಿಯಾಗಲು ಯತ್ನಿಸಿದರು. ಇವರನ್ನು ಬೆನ್ನಟ್ಟಿದ್ದ ಪೊಲೀಸರು ಇತರ ಪೊಲೀಸರಿಗೆ ವೈರ್ಲೆಸ್ ಮಾಹಿತಿ ನೀಡಿದ್ದರು. ಮಾಹಿತಿಯ ಮೇರೆಗೆ ಎದುರಿನಿಂದ ಬಂದ ಪೊಲೀಸ್ ಜೀಪ್ ಶಂಕಿತ ಕಾರಿಗೆ ಅಪಘಾತ ಮಾಡಿ ಕಾರನ್ನು ತಡೆದಿತ್ತು ಈ ವೇಳೆ ಕಾರಿನಲ್ಲಿದ್ದವರು ಪೊಲೀಸರ ಮೇಲೆ ಗುಂಡುಹಾರಿಸಿದರು. ಪ್ರತಿಯಾಗಿ ಪೊಲೀಸರೂ ಗುಂಡು ಹಾರಿಸಿದ್ದು, ಗುಂಡಿನ ಕಾಳಗ ನಡೆದಿದೆ. ಈ ಘಟನೆ ಬಜ್ಬೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಗುಂಡೇಟು ತಗುಲಿ ಸಾವನ್ನಪ್ಪಿದ ಕಾರಿನ ಚಾಲಕನನ್ನು ಪಲಿಮಾರು ನಿವಾಸಿ ಧನಂಜಯ್ ಎಂದು ಗುರುತಿಸಲಾಗಿದೆ. ಈತ ಭೂಗತಪಾತಕಿ ರವಿ ಪೂಜಾರಿಯ ಸಹಚರ ಎನ್ನಲಾಗಿದ್ದು, ಹಲವಾರು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಶಂಕಿತ ಕಾರಿನಲ್ಲಿ ಒಟ್ಟು ಮೂರು ಮಂದಿ ಇದ್ದು, ಗುಂಡು ಹಾರಾಟದ ವೇಳೆ ಇನ್ನಿಬ್ಬರು ಪಕ್ಕದ ಕಾರಿನಲ್ಲಿ ಪರಾರಿಯಾಗಿದ್ದಾರೆ. ಪೊಲೀಸರು ಒಂದು ಮಾರುತಿ ವ್ಯಾನು, ಮೊಬೈಲು ಹಾಗೂ ಎರಡು ಪಿಸ್ತೂಲನ್ನು ವಶಪಡಿಸಿಕೊಂಡಿದ್ದಾರೆ.
ಪರಾರಿಯಾದ ಇನ್ನಿಬ್ಬರ ಪತ್ತೆಗಾಗಿ ತೀವ್ರ ಶೋಧಕಾರ್ಯ ಆರಂಭಿಸಲಾಗಿದೆ ಎಂದು ಪ್ರಾಥಮಿಕ ವರದಿ ತಿಳಿಸಿದೆ. |