ಮಂಗಳೂರಿನ ಎಮ್ನೇಶಿಯ ಪಬ್ ಮೇಲೆ ಶ್ರೀರಾಮಸೇನೆ ನಡೆಸಿದ ದಾಳಿ ಕುರಿತಂತೆ ಪರ-ವಿರೋಧ ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಪೇಜಾವರಶ್ರೀಗಳು ಧ್ವನಿಗೂಡಿಸಿದ್ದು, ಪಬ್‌ಗಳಿಗೆ ಮಹಿಳೆಯರು ಹೋಗುವುದು ಖಂಡನೀಯ. ಅಂಥ ಧರ್ಮಸೂಕ್ಷ್ಮ ವಿಚಾರಗಳಲ್ಲಿ ಎಲ್ಲರೂ ವಿರೋಧ ವ್ಯಕ್ತಪಡಿಸಬೇಕು. ಆದರೆ ಕೆಲ ಯುವಕರು ಪ್ರತಿಭಟಿಸಿದ ರೀತಿ ಮಾತ್ರ ಅನಾಗರಿಕವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅವರು ಇಲ್ಲಿನ ನಿರಾಣಿ ಸಕ್ಕರೆ ಕಾರ್ಖಾನೆಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಬ್‌ಗಳಿಗೆ ಮಹಿಳೆಯರು ಹೋಗುವುದನ್ನು ಭಾರತದಲ್ಲಿ ವಿರೋಧಿಸಿದ್ದು ಸರಿಯಾಗಿದೆ. ಪಬ್ ವ್ಯವಹಾರವನ್ನು ಮಹಿಳಾ ಸಂಘಟನೆಗಳು, ಯುವಕ ಸಂಘಗಳು ಇನ್ನೂ ರಾಷ್ಟ್ರವ್ಯಾಪಿಯಾಗಿ ಪ್ರತಿಭಟಿಸಿ ವಿರೋಧ ವ್ಯಕ್ತಪಡಿಸಬೇಕು. ಅಂಥ ಕೆಟ್ಟ ಸಂಸ್ಕೃತಿ ಸಂಪ್ರದಾಯಗಳನ್ನು ಉಳಿಸುವ ಭರಾಟೆಯಲ್ಲಿ ಕೆಲವು ಯುವಕರು ನಡೆದುಕೊಂಡ ರೀತಿ ಸರಿಯಲ್ಲ.
ಅದೇ ರೀತಿಯಲ್ಲಿ ಶ್ರೀರಾಮಸೇನೆಯನ್ನು ನಿಷೇಧಿಸುವುದೂ ಸರಿಯಲ್ಲ. ಯುವಕರ ದುಡುಕುತನಕ್ಕೆ ಒಮ್ಮೆಲೇ ಅಂಥ ದೊಡ್ಡ ಶಿಕ್ಷೆ ಕೊಡದೆ ಎಚ್ಚರಿಕೆ, ಬುದ್ದವಾದಗಳಿಂದ ತಿದ್ದಿರಿ. ನಂತರ ನಿಷೇಧದಂಥ ದೊಡ್ಡ ಶಿಕ್ಷೆ ಕೊಡುವುದು ಸೂಕ್ತ ಎಂದು ಹೇಳಿದರು. |