ಲಂಚ ಸ್ವೀಕಾರ ಆರೋಪದ ಮೇಲೆ ಹಾಲಿ ಶಾಸಕ, ಸಚಿವರನ್ನು ಬಂಧಿಸಬಹುದೇ?ಅದಕ್ಕೆ ಕಾನೂನಿನಲ್ಲಿ ಅವಕಾಶ ಇದೆಯಾ ಎಂಬುದು ಜನಸಾಮಾನ್ಯರ ಪ್ರಶ್ನೆಯಾಗಿದೆ. ಲಂಚ ಪಡೆಯುವ ಜನಪ್ರತಿನಿಧಿನಗಳನ್ನು ಬಂಧಿಸಲು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 1988ರಲ್ಲಿ ಹಲವು ಅವಕಾಶಗಳಿವೆ. ಆ ನೆಲೆಯಲ್ಲಿ ಲೋಕಾಯುಕ್ತರು ಶಾಸಕ ಸಂಪಂಗಿ ವಿರುದ್ಧ ಕ್ರಮ ಕೈಗೊಂಡಿದ್ದರು.
1988ರ ಕಲಂ 7: ಪ್ರಕಾರ ಯಾವುದೇ ನೌಕರ ಅಥವಾ ಜನಪ್ರತಿನಿಧಿ (ನಾಮನಿರ್ದೇಶಿತರೂ ಸೇರಿದಂತೆ) ಸರ್ಕಾರದಿಂದ ನೀಡುವ ಅಧಿಕೃತ ಸವಲತ್ತುಗಳನ್ನು ಹೊರತುಪಡಿಸಿ ಯಾರಿಂದಲೂ ಹಣ ಅಥವಾ ಇತರೆ ಲಾಭದಾಯಕ ವಸ್ತುಗಳನ್ನು ಪಡೆಯುವಂತಿಲ್ಲ.
ಸಾರ್ವಜನಿಕ ಸೇವಕರು ಒಬ್ಬರ ಪರ ಅಥವಾ ವಿರುದ್ಧ ಕೆಲಸ ಮಾಡುವ ಉದ್ದೇಶದಿಂದ ಯಾವುದೇ ರೀತಿಯ ಅಕ್ರಮ ಗಳಿಕೆ ಮಾಡುವುದು ಅಪರಾಧವಾಗುತ್ತದೆ. ಇದಕ್ಕೆ ಕನಿಷ್ಠ ಆರು ತಿಂಗಳಿನಿಂದ ಐದು ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು.
ಕಲಂ13(1)ಡಿ ಪ್ರಕಾರ ಸಾರ್ವಜನಿಕ ಸೇವಕರು ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು ಭ್ರಷ್ಟಾಚಾರದಲ್ಲಿ ಭಾಗಿಯಾಗಿ ಬೆಲೆ ಬಾಳುವ ವಸ್ತು ಅಥವಾ ದ್ರವ್ಯ ರೂಪದ ಸಂಪತ್ತನ್ನು ಪಡೆಯುವುದು ಅಪರಾಧವಾಗುತ್ತದೆ. ಸಾರ್ವಜನಿಕ ಹಿತಾಸಕ್ತಿ ಇಲ್ಲದ ಕೆಲಸಕ್ಕೆ ತಮ್ಮ ಹುದ್ದೆಯನ್ನು ಬಳಸಿಕೊಳ್ಳುವುದು ಅಪರಾಧವಾಗುತ್ತದೆ.
ಕಲಂ 13(2)ರ ಪ್ರಕಾರ ಕ್ರಿಮಿನಲ್ ಸ್ವರೂಪದ ಅಪರಾಧದಲ್ಲಿ ಭಾಗಿಯಾದ ಸಾರ್ವಜನಿಕ ಸೇವಕರಿಗೆ ಕನಿಷ್ಠ ಒಂದು ವರ್ಷದಿಂದ ಏಳು ವರ್ಷ ಅವಧಿಯ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. |