ಮಂಗಳೂರು ಪಬ್ ಮೇಲೆ ದಾಳಿ ನಡೆಸಿ, ಯುವತಿಯರ ಮೇಲೆ ಹಲ್ಲೆ ನಡೆಸುವಂತಹ ಪ್ರಕರಣ ರಾಜ್ಯದಲ್ಲಿ ಬಲಪಂಥೀಯ ಸಂಘಟನೆಯಾದ ಶ್ರೀರಾಮಸೇನೆಯಿಂದ ಪುನರಾವರ್ತನೆಯಾದರೆ ಜಾಗ್ರತೆ ಎಂದು ಎಚ್ಚರಿಸಿರುವ ಗೃಹಸಚಿವ ವಿ.ಎಸ್.ಆಚಾರ್ಯ, ಆ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಕಾನೂನನ್ನು ಕೈಗೆತ್ತಿಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಅವರು, ಘಟನೆಯಲ್ಲಿ ಭಾಗಿಯಾದವರ ಬಗ್ಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.
ಪಬ್ ದಾಳಿ ಕುರಿತಂತೆ ಗೃಹಸಚಿವ ಆಚಾರ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸುತ್ತಿರುವ ಬಗ್ಗೆ ಕೇಳಿದ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು.
ಅವರು ಉಡುಪಿಯ ಹೆಬ್ರಿಯಲ್ಲಿ ನಡೆಯುತ್ತಿರುವ ಆರ್‌ಎಸ್‌ಎಸ್ ಚಿಂತನ ಬೈಠಕ್‌ನಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಆಡಳಿತರೂಢ ಬಿಜೆಪಿ ಸರ್ಕಾರವನ್ನು ಮುಖಭಂಗಕ್ಕೀಡು ಮಾಡಬೇಕೆಂಬ ನಿಟ್ಟಿನಲ್ಲಿ ಈ ಕೃತ್ಯ ಎಸಗಲಾಗಿದೆ ಎಂದಿರುವ ಅವರು, ಈ ಘಟನೆಯ ಹಿಂದೆ ಬಲವಾದ ಸಂಚು ಇದೆ, ಇದೊಂದು ರಾಜಕೀಯ ಪ್ರೇರಿತ ಪೂರ್ವಯೋಜಿತ ಕೃತ್ಯ ಎಂದು ದೂರಿದ್ದಾರೆ.
ಪಬ್ ದಾಳಿಯ ಹಿಂದೆ ಸಂಚಿನ ಹಿಂದೆ ಯಾರ 'ಕೈ'ವಾಡ ಇದೆ ಎಂಬುದನ್ನು ಸರಿಯಾದ ಸಮಯದಲ್ಲಿ ಹೆಸರನ್ನು ಬಹಿರಂಗಗೊಳಿಸಲಾಗುವುದು ಎಂದು ಹೇಳಿದ್ದಾರೆ. ಜನವರಿ 24ರಂದು ಎಮ್ನೇಶಿಯ ಪಬ್ ಮೇಲೆ ನಡೆದ ದಾಳಿಯ ವಿಚಾರಣೆ ಕುರಿತು ವಿವರ ನೀಡಲು ಈ ಸಂದರ್ಭದಲ್ಲಿ ಆಚಾರ್ಯ ನಿರಾಕರಿಸಿದರು. |