ಲೋಕಸಭೆ ಚುನಾವಣೆಯನ್ನು ಮುಂದಿಟ್ಟುಕೊಂಡು ಬಿಜೆಪಿಯವರು ಹಣ ಸಂಗ್ರಹಿಸಲು ಮಾಡುತ್ತಿರುವ ನಾಟಕ ಎಂಬಂತೆ, 10 ಸಾವಿರ ಕಿ.ಮೀ ರಸ್ತೆಯ ಅಭಿವೃದ್ದಿ ಯೋಜನೆ ಘೋಷಣೆ ಹೊಸ ಗಿಮಿಕ್ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ರಸ್ತೆಗಳ ಅಭಿವೃದ್ದಿ ನೆಪದಲ್ಲಿ ಟೋಲ್ ಕಲೆಕ್ಷನ್ ಮಾಡಿ ಜನರ ಜೀವ ಹಿಂಡುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ ಎಂದು ಅವರು ಟೀಕಿಸಿದರು. ಸರ್ಕಾರವೇ ಅಭಿವೃದ್ದಿಪಡಿಸಿದ ಮೈಸೂರು-ಹಾಸನ ರಸ್ತೆಗೂ ಟೋಲ್ ಕಲೆಕನ್ ಆರಂಭಿಸಿದ್ದಾರೆ. ಇಂತಹ ನಿರ್ಧಾರಗಳು ಅಗತ್ಯವಿರಲಿಲ್ಲ. ಇವೆಲ್ಲವೂ ಬಿಜೆಪಿ ಹಣ ಮಾಡಲು ಹೂಡಿರುವ ಯೋಜನೆಗಳು ಎಂದು ಆಪಾದಿಸಿದರು.
ಈಗ ಒಬ್ಬ ಖೇಣಿ ಬಿಎಂಐಸಿ ರಸ್ತೆ ಮಾಡುವುದಾಗಿ ಹೇಳಿ ರಾಜ್ಯ ಪ್ರಕೃತಿ ಸಂಪತ್ತು ಮತ್ತು ಟೋಲ್ ಕಲೆಕ್ಷನ್ ಮೂಲಕ ಲೂಟಿ ಹೊಡೆಯಲು ಆರಂಭಿಸಿದ್ದಾನೆ. ಇನ್ನು 10 ಸಾವಿರ ಜಿಲ್ಲಾ ಮತ್ತು 12 ಸಾವಿರ ಕಿ.ಮೀ ಗ್ರಾಮಾಂತರ ಪ್ರದೇಶ ರಸ್ತೆಗಳನ್ನು ಖಾಸಗಿ ಕಂಪೆನಿಗಳಿಗೆ ಅಭಿವೃದ್ದಿಪಡಿಸಲು ಗುತ್ತಿಗೆ ನೀಡಿದರೆ, ರಾಜ್ಯದ ಕಥೆ ಅಲ್ಲಿಗೆ ಮುಗಿಯಿತು. ನೂರಾರು ಖೇಣಿಗಳು ರಸ್ತೆ ಅಭಿವೃದ್ದಿಯ ನೆಪದಲ್ಲಿ ಸಾಮಾನ್ಯ ಜನರನ್ನು ಸುಲಿಗೆ ಮಾಡಲು ಉತ್ತಮ ಅವಕಾಶವನ್ನು ಸರ್ಕಾರವೇ ಮಾಡಿಕೊಟ್ಟಂತಾಗುತ್ತದೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸೀಟು ಗಳಿಸಿ ಅಡ್ವಾಣಿಯವರನ್ನು ಪ್ರಧಾನಿಯನ್ನಾಗಿ ಮಾಡುವ ಉದ್ದೇಶ ಬಿಜೆಪಿಯದ್ದು. ಅದಕ್ಕಾಗಿ ಬಡ ಜನರಿಗೆ ಮೋಸ ಮಾಡುತ್ತಿದೆ ಎಂದು ಕುಮಾರಸ್ವಾಮಿ ಕಿಡಿ ಕಾರಿದರು. |