ಕೆಜಿಎಫ್ ಶಾಸಕ ವೈ.ಸಂಪಂಗಿ ಲಂಚಪುರಾಣ ಪ್ರಕರಣಕ್ಕೆ ಸಂಬಂಧಿಸಿದಂತೆ, ಲೋಕಾಯುಕ್ತಕ್ಕೆ ನೀಡಿದ ದೂರನ್ನು 24ಗಂಟೆಯೊಳಗೆ ವಾಪಸ್ ಪಡೆಯಬೇಕು ಇಲ್ಲದಿದ್ದಲ್ಲಿ ಕೊಲೆ ಮಾಡುವುದಾಗಿ ಜೀವ ಬೆದರಿಕೆಯ ದೂರವಾಣಿ ಕರೆ ಬಂದಿರುವುದಾಗಿ ಫಾರೂಕ್ ಟಿವಿ9ಗೆ ನೀಡಿದ ವಿವರಣೆಯಲ್ಲಿ ತಿಳಿಸಿದ್ದಾರೆ.
ಶಾಸಕರ ಭವನದಲ್ಲಿ ಕ್ರಿಮಿನಲ್ ಮೊಕದ್ದಮೆಯೊಂದನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ಫಾರೂಕ್ ಎಂಬವರಿಂದ 5ಲಕ್ಷ ರೂ.ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲೇ ಶಾಸಕ ಸಂಪಂಗಿಯನ್ನು ಗುರುವಾರ ಲೋಕಾಯುಕ್ತ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು.
ಈ ಪ್ರಕರಣವೀಗ ರಾಜ್ಯರಾಜಕಾರಣದಲ್ಲಿ ತೀವ್ರ ಕೋಲಾಹಲ ಎಬ್ಬಿಸಿದ್ದರೆ, ಮತ್ತೊಂದೆಡೆ ಲೋಕಾಯುಕ್ತರ ದಾಳಿ ಬಗ್ಗೆ ಅಪಸ್ವರ ಕೇಳಿ ಬರತೊಡಗಿದೆ.
ಏತನ್ಮಧ್ಯೆ ಸಂಪಂಗಿ ವಿರುದ್ಧ ದೂರು ನೀಡಿದ್ದ ಫಾರೂಕ್‌ಗೆ ಜೀವ ಬೆದರಿಕೆಯ ದೂರವಾಣಿ ಕರೆ ಬಂದಿದ್ದು, 24ಗಂಟೆಯೊಳಗೆ ದೂರನ್ನು ವಾಪಸು ಪಡೆಯುಂತೆ ಧಮಕಿ ಹಾಕಿದ್ದರೆನ್ನಲಾಗಿದೆ. ಪೊಲೀಸ್‌ಗೆ ದೂರು ನೀಡಿದ್ದರೂ ಕೂಡ ಈವರೆಗೂ ರಕ್ಷಣೆ ನೀಡಿಲ್ಲ ಎಂದು ಆಪಾದಿಸಿದ್ದಾರೆ. ಯಾರು ಬೇಕಾದರು ಬೆದರಿಕೆ ಹಾಕಲಿ, ನನ್ನ ಜೀವ ಹೋದರು ಕೂಡ ದೂರು ವಾಪಸ್ ಪಡೆಯಲಾರೆ ಎಂದು ಫಾರೂಕ್ ಸ್ಪಷ್ಟುಪಡಿಸಿದ್ದಾರೆ. |