ಮಂಗಳೂರು ಹೊರವಲಯದಲ್ಲಿ ಶುಕ್ರವಾರ ಬೆಳಿಗ್ಗೆ ಎನ್‌ಕೌಂಟರ್ ನಡೆದ ವಿಷಯ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿದ್ದು, ಮಾರುತಿ ವ್ಯಾನ್‌ನಲ್ಲಿ ಇದ್ದ ದುಷ್ಕರ್ಮಿಗಳ ಸಂಖ್ಯೆ ಎಷ್ಟು ಎಂಬುದು ಪೊಲೀಸ್ ಹೇಳಿಕೆಯಿಂದ ಗೊಂದಲಕ್ಕೆ ಕಾರಣವಾಗಿದೆ.
ಮಂಗಳೂರಿಗೂ ಮುಂಬೇ-ದುಬೈ ಭೂಗತ ಲೋಕಕ್ಕೂ ನಂಟು ಹೊಸದೇನಲ್ಲ. ಹಫ್ತಾ ವಸೂಲಿ ಹೆಸರು ಬಂದಾಗಲೆಲ್ಲಾ ಮುಂಬಯಿ ಭೂಗತಲೋಕದೊಂದಿಗೆ ಮಂಗಳೂರು ಕೂಡ ಗುರುತಿಸಿಕೊಳ್ಳುವಷ್ಟು (ಅಪ)ಖ್ಯಾತಿ ಪಡೆದಿದೆ. ಈ ಕಾರಣಕ್ಕೆ, ಮೃತ ವ್ಯಕ್ತಿಯ ಗುರುತು ಪತ್ತೆಯಾದಲ್ಲಿ ಈ ಎನ್‌ಕೌಂಟರ್ ಎಷ್ಟು ಗಂಭೀರವಾದುದು ಎಂಬುದು ಇನ್ನೂ ಖಚಿತವಾಗಬೇಕಿದೆ.
ಆದರೆ, ಮುಲ್ಕಿಯಿಂದ ಗುರುಪುರ ಕೈಕಂಬ ಸಮೀಪವಿರುವ ಪೊಳಲಿದ್ವಾರದವರೆಗೂ ಮಾರುತಿ ವ್ಯಾನ್ ಅನ್ನು ಬೆನ್ನಟ್ಟುತ್ತಾ ಬಂದಿದ್ದು, ಒಬ್ಬ ದುಷ್ಕರ್ಮಿ ಗುಂಡಿನ ಕಾಳಗದಲ್ಲಿ ಬಲಿಯಾಗಿದ್ದಾನೆ ಎಂಬುದು ನಿಜವಾದರೂ, ತಪ್ಪಿಸಿಕೊಂಡು ಓಡಿಹೋದವರೆಷ್ಟು ಮಂದಿ ಎಂಬ ಬಗ್ಗೆ ಪೊಲೀಸರ ಹೇಳಿಕೆ ಗೊಂದಲಕ್ಕೆ ಕಾರಣವಾಗಿದೆ. ಅಲ್ಲಿ ಮೂವರಿದ್ದರು, ಅವರಲ್ಲೊಬ್ಬ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಎಂದು ಒಬ್ಬ ಪೊಲೀಸ್ ಅಧಿಕಾರಿ ಟಿವಿ ಚಾನೆಲ್‌ಗೆ ಹೇಳಿಕೆ ನೀಡಿದ್ದರೆ, ಮೂರು ಮಂದಿ ಪರಾರಿಯಾಗಿದ್ದಾರೆ ಎಂದು ಮತ್ತೊಬ್ಬ ಅಧಿಕಾರಿ ಹೇಳಿದ್ದರು.
ಎನ್‌ಕೌಂಟರ್ ಸ್ಥಳದಲ್ಲಿ ದೊರೆತ ಒಂದು ಮೊಬೈಲ್ ಫೋನ್ ಮತ್ತು ಎರಡು ಪಿಸ್ತೂಲ್‌ಗಳನ್ನು ಗಮನಿಸಿದರೆ, ಯಾವುದೇ ಗುಂಡಿನ ಚಕಮಕಿ/ಬುಲೆಟ್ ಗುರುತುಗಳಿಲ್ಲದೆ ಈ ಎನ್‌ಕೌಂಟರ್ ನಡೆದಿದ್ದು ಹೇಗೆ ಎಂಬುದು ಪ್ರಶ್ನೆಯಾಗಿ ಉಳಿದಿದೆ.
ಒಟ್ಟಿನಲ್ಲಿ ಕಳೆದ ಕೆಲವು ದಿನಗಳಿಂದ ಕರಾವಳಿಯ ಸುಂದರ ನಗರಿ ಮಂಗಳೂರು ಸುದ್ದಿಗೆ ಗ್ರಾಸವಾಗುತ್ತಿದೆ. ಚರ್ಚ್ ಮೇಲಿನ ದಾಳಿ, ಪಬ್ ಮೇಲಿನ ದಾಳಿ, ಇತ್ತೀಚೆಗೆ ಪಾಕಿಸ್ತಾನಿ ಉಗ್ರಗಾಮಿಗಳು ಸಿಕ್ಕಿಬಿದ್ದಿರುವುದು ಇತ್ಯಾದಿ ಪ್ರಕರಣಗಳೊಂದಿಗೆ ಮಂಗಳೂರು ಹೆಸರು ಮತ್ತಷ್ಟು ಹಾಳಾಗತೊಡಗಿದೆ. |