ಲಂಚ ಸ್ವೀಕಾರ ಪ್ರಕರಣದಲ್ಲಿ ಬಂಧಿತರಾಗಿರುವ ಕೆಜಿಎಫ್ ಶಾಸಕ ವೈ.ಸಂಪಂಗಿ ಶುಕ್ರವಾರ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಕ್ಕೆ ಗೈರು ಹಾಜರಾಗಿರುವ ಬಗ್ಗೆ ನ್ಯಾಯಾಧೀಶರು ತೀವ್ರ ಅಸಮಾಧಾನ ವ್ಯಕ್ತಪಡಿಸಿ ವಿಚಾರಣೆಯನ್ನು ನಾಳೆಗೆ ಮುಂದೂಡಿದ್ದಾರೆ.
ಶಾಸಕರ ಭವನದಲ್ಲಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಕೆಜಿಎಫ್ ಶಾಸಕ ಸಂಪಂಗಿ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದು, ರಾತ್ರಿ ವಿಶೇಷ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ನೀಡಲು ನಿರಾಕರಿಸಿ, ಶುಕ್ರವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದ್ದರು.
ಏತನ್ಮಧ್ಯೆ ತೀವ್ರ ಎದೆನೋವಿನ ಕಾರಣದಿಂದ ನಗರದ ಜಯದೇವ ಆಸ್ಪತ್ರೆಗೆ ಸಂಪಂಗಿ ಅವರನ್ನು ದಾಖಲಿಸಲಾಗಿತ್ತು. ಇಂದು 23ನೇ ಹೆಚ್ಚುವರಿ ವಿಶೇಷ ನ್ಯಾಯಾಲಯಕ್ಕೆ ಸಂಪಂಗಿ ಅನಾರೋಗ್ಯದಿಂದಾಗಿ ಗೈರು ಹಾಜರಾಗಿರುವುದಾಗಿ ವಕೀಲ ಶ್ಯಾಮಸುಂದರ ವಿವರಣೆ ನೀಡಿದಾಗ, ನ್ಯಾಯಾಧೀಶರಾದ ಶೆಟ್ಟರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಯಥಾಸ್ಥಿತಿಯಲ್ಲೇ ನ್ಯಾಯಾಲಯಕ್ಕೆ ಹಾಜರಾಗುವಂತೆ ತಿಳಿಸಿ, ಹಾಜರಾಗುವವರೆಗೆ ನ್ಯಾಯಾಂಗ ಬಂಧನ ಮುಂದುವರಿಯಲಿದ್ದು, ವಿಚಾರಣೆ ನಾಳೆಗೆ ಮುಂದೂಡಿರುವುದಾಗಿ ತಿಳಿಸಿದರು. |