ತೈಲ ಬೆಲೆ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ದರದಲ್ಲಿ ಶೇ. 5 ರಿಂದ 8 ರಷ್ಟು ಇಳಿಕೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಎರಡು ತಿಂಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎರಡು ಬಾರಿ ಇಳಿಸಲಾಗಿದೆ. ಇದರಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ ಇಳಿಕೆಯಾಗಿರುವುದು ಕೇವಲ 4 ರೂ. ಹೀಗಾಗಿ ಬಸ್ ಪ್ರಯಾಣ ದರ ಇಳಿಕೆಯಲ್ಲಿ ಹೆಚ್ಚಿನ ಪ್ರಮಾಣ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಸೂಚನೆಯನ್ನು ಸರಕಾರ ನೀಡಿದೆ.
ಡೀಸೆಲ್ ಬೆಲೆ ಇಳಿಕೆಯಾಗಿರುವ ಪ್ರಮಾಣಕ್ಕೆ ಅನುಗುಣವಾಗಿ ಪ್ರಯಾಣ ದರದಲ್ಲಿ ಎಷ್ಟು ಕಡಿಮೆ ಮಾಡಲು ಸಾಧ್ಯವಿದೆ ಎಂಬ ಕುರಿತು ವರದಿ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸರಕಾರ ಸೂಚನೆ ನೀಡಿದೆ. ಸಾಮಾನ್ಯ ಬಸ್ ಪ್ರಯಾಣ ದರದಲ್ಲಿ ಶೇ 8ರಷ್ಟು ಕಡಿಮೆ ಆಗುವ ಸಾಧ್ಯತೆ ಇದ್ದರೆ ಲಕ್ಸುರಿ ಹಾಗೂ ವೋಲ್ವೊ ಬಸ್ ಪ್ರಯಾಣ ದರದಲ್ಲಿ ಶೇ 5ರಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ನೂರು ಕಿ.ಮೀ ಗಿಂತಲೂ ದೂರದ ಪ್ರಯಾಣ ದರದಲ್ಲಿ 5 ರೂ.ನಿಂದ 25 ರೂ.ವರೆಗೆ ಕಡಿಮೆ ಆಗಲಿದೆ. ನೂರು ಕಿ.ಮೀ ಒಳಗಿನ ಬಸ್ ಪ್ರಯಾಣ ದರದಲ್ಲಿ ಇಳಿಕೆಯಾಗಲಿದೆ. ಎಷ್ಟು ಇಳಿಕೆ ಮಾಡಬೇಕೆಂಬ ಲೆಕ್ಕಚಾರದಲ್ಲಿ ಕೆಎಸ್ಆರ್‌ಟಿಸಿ ಅಧಿಕಾರಿಗಳು ನಿರತರಾಗಿದ್ದಾರೆ ಎನ್ನಲಾಗಿದೆ. |