ನಗರದ ಎಮ್ನೇಶಿಯ ಪಬ್ ಮೇಲೆ ಶ್ರೀರಾಮಸೇನೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಬೆಳಿಗ್ಗೆ ಮಹಿಳಾ ಆಯೋಗದ ನಿರ್ಮಲಾ ಅವರು ಭೇಟಿ ನೀಡಿ, ಪಬ್‌ನಲ್ಲಿ ಮಹಿಳೆಯರಿಗೆ ಸೂಕ್ತವಾದ ರಕ್ಷಣೆಯ ವ್ಯವಸ್ಥೆಯೇ ಇಲ್ಲ ಎಂದು ಕಿಡಿಕಾರಿದ್ದಾರೆ.
ಇಂದು ಬೆಳಿಗ್ಗೆ ನಗರಕ್ಕೆ ಆಗಮಿಸಿದ ಅವರು, ಮೊದಲಿಗೆ ಅಧಿಕಾರಿಗಳನ್ನು ಭೇಟಿಯಾಗಿ ಘಟನೆಯ ಕುರಿತು ಪೂರ್ಣ ಮಾಹಿತಿಯನ್ನು ಪಡೆದುಕೊಂಡಿದ್ದರು.
ಬಳಿಕ ಎಮ್ನೇಶಿಯ ಪಬ್‌ಗೆ ತೆರಳಿ ಪರಿಶೀಲನೆ ನಡೆಸಿದ ಅವರು, ಪಬ್ ಮಾಲೀಕರನ್ನು ಪ್ರಶ್ನಿಸಿದಾಗ ಸಮರ್ಪಕವಾದ ಉತ್ತರ ನೀಡದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರಲ್ಲದೆ, ಎಮ್ನೇಶಿಯ ಅವ್ಯವಸ್ಥೆಯ ಆಗರ ಎಂದು ಹೇಳಿದ್ದಾರೆ.
ಪಬ್‌ನಲ್ಲಿ ಅಮಲು ಪದಾರ್ಥ ಮಾರಾಟ ಮಾಡಲು ಲೈಸೆನ್ಸ್ ಇಲ್ಲದಿದ್ದರೂ ಕೂಡ,ಅಲ್ಲಿ ಮದ್ಯ ಮಾರಾಟ ಮಾಡುತ್ತಿರುವ ಅಂಶವು ಪರಿಶೀಲನೆಯ ವೇಳೆ ಕಂಡುಕೊಂಡಿರುವುದಾಗಿ ನಿರ್ಮಲಾ ವಿವರಿಸಿದ್ದಾರೆ. ಅಲ್ಲದೇ ಪಬ್‌ನಲ್ಲಿ ಸೆಕ್ಯುರಿಟಿಯ ವ್ಯವಸ್ಥೆಯೂ ಇಲ್ಲ ಎಂದು ಹರಿಹಾಯ್ದಿದ್ದಾರೆ. ಪಬ್‌ನ ಲೈಸೆನ್ಸ್ ರದ್ದುಗೊಳಿಸುವಂತೆ ಶಿಫಾರಸು ಮಾಡಲಾಗುವುದು ಎಂದರು.
ನಗರದಲ್ಲಿರುವ ಎಲ್ಲಾ ಪಬ್‌ಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು. |