ನಗರದ ಪಬ್ ಮೇಲೆ ನಡೆದ ದಾಳಿ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್‌ಗೆ ಶುಕ್ರವಾರ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಲು ನಿರಾಕರಿಸಿದೆ.
ದಾವಣಗೆರೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮುತಾಲಿಕ್ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿ, ದಾವಣಗೆರೆ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಬುಧವಾರ ಅಲ್ಲಿನ ಸ್ಥಳೀಯ ನ್ಯಾಯಾಲಯ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿದ್ದಂತೆಯೇ, ಪಬ್ ದಾಳಿಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮುತಾಲಿಕ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.
ಇಂದು ಸಂಜೆ ನಗರದ ಪ್ರಥಮ ದರ್ಜೆ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಧೀಶರಾದ ಕೆ.ಎಸ್.ವಿಜಯ್ ಅವರು ಜಾಮೀನು ನೀಡಲು ನಿರಾಕರಿಸಿ, ಮತ್ತೊಂದು ದಿನ ನ್ಯಾಯಾಂಗ ಬಂಧನಕ್ಕೆ ಗುರಿಪಡಿಸಿದ್ದಾರೆ.
ಮಂಗಳೂರಿನ ಪಬ್ ಮೇಲೆ ಶ್ರೀರಾಮ ಸೇನೆ ಕಾರ್ಯಕರ್ತರು ನಡೆಸಿದ ದಾಳಿಯನ್ನು ಮುತಾಲಿಕ್ ಅವರು ಬಲವಾಗಿ ಸಮರ್ಥಿಸಿಕೊಂಡಿರುವುದೇ ಅವರಿಗೆ ಮುಳುವಾಗಿದೆ. ನಾಳೆಯವರೆಗೆ ಜೈಲಿನಲ್ಲಿ ಕಳೆಯಬೇಕಾಗಿರುವ ಮುತಾಲಿಕ್ ಅವರಿಗೆ ನ್ಯಾಯಾಲಯ ಜಾಮೀನು ನೀಡಿದರೂ ಕೂಡ, ಮಡಿಕೇರಿಯ ಶುಂಠಿಕೊಪ್ಪದ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಳ್ಳಲು ಜಾಮೀನು ರಹಿತ ವಾರಂಟ್‌ನೊಂದಿಗೆ ಸಿದ್ದವಾಗಿ ನಿಂತಿದ್ದಾರೆ. |