ಶಾಸಕರ ಭವನದಲ್ಲಿಯೇ ಲಂಚಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತರ ಅತಿಥಿಯಾದ ಕೆಜಿಎಫ್‌ನ ಬಿಜೆಪಿ ಶಾಸಕ ವೈ.ಸಂಪಂಗಿ, ತಾನು 50ಸಾವಿರ ರೂ. ಹಾಗೂ 4.50ಲಕ್ಷ ಚೆಕ್ ಸ್ವೀಕರಿಸಿದ್ದು ನಿಜ ಎಂಬುದಾಗಿ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿ ಲೋಕಾಯುಕ್ತ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ತಿಳಿಸಿದರು.
ಉದ್ಯಮಿ ಫರೂಕ್ ಮತ್ತು ನಯಾಜ್ ನಡುವಿನ ನಿವೇಶನ ವಿವಾದವನ್ನು ಬಗೆಹರಿಸುವ ದೃಷ್ಟಿಯಿಂದ ನಯಾಜ್‌ಗೆ ನೀಡುವುದಕ್ಕಾಗಿ ಹಣ ಮತ್ತು ಚೆಕ್ ತೆಗೆದುಕೊಂಡಿದ್ದಾಗಿ ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕರು ಲೋಕಾಯುಕ್ತರ ವಿರುದ್ಧವೇ ಆರೋಪ ಮಾಡಿರುವ ವಿಚಾರ ತಮಗೆ ಗೊತ್ತಿಲ್ಲ ಎಂದು ಶುಕ್ರವಾರ ಇಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರಿಗೆ ವಿವರಿಸಿದರು.
ಫರೂಕ್ ನೀಡಿದ ಪುರಾವೆಗಳನ್ನು ಪರಿಶೀಲಿಸಿ, ಅದರಲ್ಲಿ ಸತ್ಯಾಂಶ ಇರುವುದನ್ನು ಖಚಿತಪಡಿಸಿಕೊಂಡ ನಂತರವೇ ದಾಳಿ ನಡೆಸಿದ್ದೇವೆ. ಫರೂಕ್‌ಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂದು ದೂರು ಬಂದಿದೆ. ಅವರಿಗೆ ಸೂಕ್ತ ರಕ್ಷಣೆ ನೀಡುವಂತೆ ಕೆಜಿಎಫ್ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಅವರಿಗೆ ಏನಾದರೂ ಆದರೆ ಪೊಲೀಸರೆ ಹೊಣೆ ಎಂದು ಹೇಳಿದ್ದೇವೆ ಎಂದರು.
ಏತನ್ಮಧ್ಯೆ ಇನ್ಸ್‌ಪೆಕ್ಟರ್ ಲಕ್ಷ್ಮಯ್ಯ ಮತ್ತು ಸಬ್ ಇನ್ಸ್‌ಪೆಕ್ಟರ್ ಪಾಷಾ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಶಾಸಕರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಲ್ಯಾಬ್ ವರದಿ ಬಂದ ನಂತರ ವಿಚಾರಣೆಯನ್ನು ಪೂರ್ಣಗೊಳಿಸಿ ಆರೋಪ ಪಟ್ಟಿಯನ್ನು ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಪಾಷಾ-ಲಕ್ಷ್ಮಯ್ಯ ಅಮಾನತು: ಲಂಚ ಸ್ವೀಕರಿಸಿದ ಆರೋಪದಲ್ಲಿ ಶಾಸಕ ಸಂಪಂಗಿ ಸಿಕ್ಕಿಬಿದ್ದು ಆರೋಗ್ಯ ಸರಿಯಿಲ್ಲ ಎಂಬ ನಾಟಕ ಮಾಡುತ್ತಿರುವ ತನ್ಮಧ್ಯೆಯ, ಆಂಡರ್ಸನ್ ಠಾಣೆಯ ಎಸ್.ಐ. ಪಾಷಾ ಹಾಗೂ ಸಬ್ ಇನ್ಸ್‌ಪೆಕ್ಟರ್ ಲಕ್ಷ್ಮಯ್ಯ ಲಂಚ ನೀಡುವಂತೆ ಕುಮ್ಮಕ್ಕು ನೀಡಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕಮಲ್ ಪಂತ್ ತಿಳಿಸಿದ್ದಾರೆ. |