ಬಿಜೆಪಿ ಶಾಸಕ ವೈ.ಸಂಪಂಗಿ ಅವರು ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿರುವ ಹಿನ್ನೆಲೆಯಲ್ಲಿ ಸ್ಪೀಕರ್ ಜಗದೀಶ್ ಶೆಟ್ಟರ್ ಅವರು ಕೈಗೊಳ್ಳುವ ಕ್ರಮವನ್ನು ಕಾದು ನೋಡುವುದಾಗಿ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ವಿ.ಎಸ್. ಉಗ್ರಪ್ಪ ಹೇಳಿದರು.
ಬಿಜೆಪಿ ಎಂದರೆ ಭ್ರಷ್ಟಾಚಾರದ ಗಂಗೋತ್ರಿ ಎನ್ನುವುದು ಸಂಪಂಗಿ ಪ್ರಕರಣದಿಂದ ಸಾಬೀತಾಗಿದೆ. ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಲಂಚ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಶವಪೆಟ್ಟಿಗೆ ಹಗರಣವೂ ಅವರ ಕಾಲದಲ್ಲಿಯೇ ನಡೆಯಿತು. ರಾಜಸ್ತಾನ ಮುಖ್ಯಮಂತ್ರಿ ವಸುಂಧರರಾಜೇ ವಿರುದ್ಧ ಆ ಪಕ್ಷದ ಹಿರಿಯ ನಾಯಕರೇ ಭ್ರಷ್ಟಾಚಾರದ ಆರೋಪ ಮಾಡಿದ್ದರು.
ಇದೀಗ ಲಂಚ ಪ್ರಕರಣದಲ್ಲಿ ಬಿಜೆಪಿಯ ಶಾಸಕರು ಸಿಕ್ಕಿ ಬೀಳುವ ಮೂಲಕ ಬಿಜೆಪಿಯ ನಿಜ ಸ್ವರೂಪ ಬಯಲಾಗಿದೆ ಎಂದು ಅವರು ಹೇಳಿದರು.
ಸಂಪಂಗಿ ಅವರು ಪ್ರಕರಣವೊಂದರಲ್ಲಿ ಪೊಲೀಸರಿಂದ ನ್ಯಾಯಾಲಯಕ್ಕೆ ಬಿ-ರಿಪೋರ್ಟ ಹಾಕಿಸಲು ಲಂಚ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಬಿಜೆಪಿಯ ಬಹುತೇಕ ಶಾಸಕರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದರು. ಅಧಿಕಾರಿಗಳನ್ನು ಕಾನೂನು ಸುವ್ಯವಸ್ಥೆ ರಕ್ಷಣೆ, ಅಭಿವೃದ್ದಿ ಕಾರ್ಯಗಳಿಗೆ ಬಳಸದೆ ಈ ರೀತಿ ಬಳಸಿಕೊಳ್ಳುತ್ತಿರುವುದು ಸಹ ಇದರಿಂದ ಬಯಲಾಗಿದೆ ಎಂದು ಹೇಳಿದರು. ಇಂತಹ ಪರಿಸ್ಥಿತಿಗೆ ಮುಖ್ಯಮಂತ್ರಿಗಳು ಮತ್ತು ಅವರ ಕಚೇರಿ ನೇರ ಹೊಣೆಯಾಗಿದೆ ಎಂದು ಉಗ್ರಪ್ಪ ದೂರಿದರು. |