ರಾಜ್ಯ ಪೊಲೀಸ್ ಇಲಾಖೆಯ ನೂತನ ಡಿಜಿಪಿಯಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರು ಶನಿವಾರ ಅಧಿಕಾರ ಸ್ವೀಕರಿಸಿದರು.
ಈ ಹಿಂದೆ ಡಿಜಿಪಿಯಾಗಿದ್ದ ಶ್ರೀಕುಮಾರ್ ಅವರ ಅಧಿಕಾರವಧಿ ಇಂದು ಮುಕ್ತಾಯಗೊಂಡಿದ್ದು, ಅವರ ಹುದ್ದೆಯನ್ನು ದಕ್ಷ ಮತ್ತು ಪ್ರಾಮಾಣಿಕ ಎಂಬ ಕೀರ್ತಿಗೆ ಭಾಜನರಾಗಿರುವ ಅಜಯ್ ಕುಮಾರ್ ನೂತನ ಡಿಜಿಪಿಯಾಗಿ ಪದಗ್ರಹಣ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ 1951ರಲ್ಲಿ ಹುಟ್ಟಿದ ಸಿಂಗ್, ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ 1973ರಲ್ಲಿ ರಾಜಕೀಯ ವಿಜ್ಞಾನದಲ್ಲಿ ಎಂ.ಎ ಪದವಿ ಪಡೆದಿದ್ದರು. 1974ರಲ್ಲಿ ಐಪಿಎಸ್‌ಗೆ ಸೇರಿದ ಅವರು, 1976ರಲ್ಲಿ ಕರ್ನಾಟಕಕ್ಕೆ ಪಾದರ್ಪಣೆ ಮಾಡಿದ್ದರು.
ಆರಂಭದಲ್ಲಿ ದಕ್ಷಿಣಕನ್ನಡ, ಗುಲ್ಬರ್ಗಾ, ಶಿವಮೊಗ್ಗ,ಮಂಡ್ಯ,ಮೈಸೂರು ಜಿಲ್ಲೆಗಳಲ್ಲಿ ಎಸ್ಪಿಯಾಗಿ ನಿಷ್ಠೆಯಿಂದ ಕಾರ್ಯನಿರ್ವಹಿಸುವ ಮೂಲಕ ಹೆಸರು ಗಳಿಸಿದವರು.
1979ರಿಂದ 81ರವರೆಗೆ ಬೆಂಗಳೂರು ನಗರದಲ್ಲಿ ಅಪರಾಧ ವಿಭಾಗದ ಡಿಸಿಪಿಯಾಗಿ ಕಾರ್ಯನಿರ್ವಹಿಸಿದ್ದರು. 1981-83ರವರೆಗೆ ಶಿವಮೊಗ್ಗದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದರು. 1984-88ರವರೆಗೆ ಬೆಂಗಳೂರಿನ ಸಂಚಾರಿ ವಿಭಾಗದ ಡಿಸಿಪಿ ಆಗಿ, 1992-93ರವರೆಗೆ ಮೈಸೂರು ದಕ್ಷಿಣ ವಲಯ ಡಿಐಜಿಪಿ ಆಗಿ ಕರ್ತವ್ಯ ನಿರ್ವಹಿಸಿದ್ದರು.
ನಂತರ 1993ರಿಂದ94ರವರೆಗೆ ಕೇಂದ್ರ ವಲಯದ ಡಿಐಜಿಪಿಯಾಗಿ, 1998ರಿಂದ 2001ರವರೆಗೆ ಬೆಂಗಳೂರು ನಗರದ ಜಂಟಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. 2001ರಿಂದ 2005ರವರೆಗೆ ನೇಮಕಾತಿ ಮತ್ತು ತರಬೇತಿ ವಿಭಾಗಕ್ಕೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದರು. 2005ರಿಂದ 06ರವರೆಗೆ ಬೆಂಗಳೂರು ನಗರ ಆಯುಕ್ತರಾದರು.
2007ರಿಂದ ಈವರೆಗೆ ಸಿಓಡಿ ಘಟಕದ ಆರ್ಥಿಕ ಅಪರಾಧಗಳ ಹಾಗೂ ತರಬೇತಿ ವಿಶೇಷ ಘಟಕಗಳ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. |