ಪಬ್ ದಾಳಿ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್‌ಗೆ ಶನಿವಾರ ನಗರದ 3ನೇ ಜೆಎಂಎಫ್‌ಸಿ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬರುತ್ತಿದ್ದಂತೆಯೇ ಮಡಿಕೇರಿ ಪೊಲೀಸರು ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ದಾವಣಗೆರೆಯಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ್ದಕ್ಕೆ ಬೆಳಗಾವಿಯಲ್ಲಿ ಬಂಧನಕ್ಕೀಡಾಗಿದ್ದ ಮುತಾಲಿಕ್ ಅವರನ್ನು ದಾವಣಗೆರೆ ಪೊಲೀಸರು ವಶಕ್ಕೆ ತೆಗೆದುಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅಲ್ಲಿನ ನ್ಯಾಯಾಲಯ ಜಾಮೀನು ನೀಡಿದ ನಂತರ, ಪಬ್ ದಾಳಿ ಪ್ರಕರಣದಲ್ಲಿ ಮಂಗಳೂರು ಪೊಲೀಸರು ಮುತಾಲಿಕ್ ಅವರನ್ನು ವಶಕ್ಕೆ ತೆಗೆದುಕೊಂಡಿದ್ದರು.
ಶುಕ್ರವಾರ ಅವರನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ನ್ಯಾಯಾಲಯ ಜಾಮೀನು ನಿರಾಕರಿಸಿದ ಪರಿಣಾಮ ಮತ್ತೊಂದು ದಿನ ಜೈಲಿನಲ್ಲಿ ಕಳೆಯುವಂತಾಗಿತ್ತು.
ಶನಿವಾರ ಮತ್ತೆ ಮುತಾಲಿಕ್ ಅವರನ್ನು 3ನೇ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿತ್ತು. ಆದರೆ ಕೊಡಗಿನಲ್ಲಿ ಈ ಹಿಂದೆ ನಡೆದ ವಿರಾಟ್ ಹಿಂದೂ ಸಮಾವೇಶದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಡಿಕೇರಿ ಪೊಲೀಸರು ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. |