ಭ್ರಷ್ಟಚಾರಿಗಳ ವಿರುದ್ಧ ಸಮರ ಸಾರಿ ರಾಜ್ಯಾದ್ಯಂತ ಹೆಸರು ಗಳಿಸಿದ್ದ ನಿವೃತ್ತ ನ್ಯಾಯಮೂರ್ತಿ ಹಾಗೂ ನಿವೃತ್ತ ಲೋಕಾಯುಕ್ತ ಎನ್.ವೆಂಕಟಾಚಲ ಅವರು ಶನಿವಾರ ಭಾರತೀಯ ಜನತಾಪಕ್ಷಕ್ಕೆ ಸೇರ್ಪಡೆಗೊಂಡರು.
ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಅವರ ಸಮ್ಮುಖದಲ್ಲಿ ಬಿಜೆಪಿಗೆ ಅಧಿಕೃತವಾಗಿ ಸೇರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಬಿಜೆಪಿಗೆ ರಾಜಕೀಯ ಇಚ್ಛಾಶಕ್ತಿ ಇದೆ, ಅದನ್ನು ಮೆಚ್ಚಿ ತಾನು ಪಕ್ಷಕ್ಕೆ ಸೇರಿರುವುದಾಗಿ ಹೇಳಿದರು.
ಭ್ರಷ್ಟಾಚಾರ ಎಂಬುದು ಇಲ್ಲದಿದ್ದರೆ ಕಳೆದ 60ವರ್ಷಗಳಲ್ಲಿ ದೇಶದಲ್ಲಿ ಬಡತನ ಸಂಪೂರ್ಣವಾಗಿ ನಿರ್ಮೂಲನೆ ಆಗುತ್ತಿತ್ತು. ರಾಜಕಾರಣಿಗಳು ಮತ್ತು ಅಧಿಕಾರಿಗಳಲ್ಲೇ ಭ್ರಷ್ಟಾಚಾರ ಹೆಚ್ಚಾಗಿರುವುದು. ಚುನಾವಣೆಗೆ ಮೊದಲು ಭ್ರಷ್ಟಾಚಾರ ನಿರ್ಮೂಲನೆ ಮಾಡುವುದಾಗಿ ಘೋಷಿಸುವುದು ಸಾಮಾನ್ಯ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೂ ಭ್ರಷ್ಟಾಚಾರ ನಿರ್ಮೂಲನೆಗೆ ಬದ್ದತೆ ಪ್ರದರ್ಶಿಸಿದೆ ಎಂದರು.
ಕೆಜಿಎಫಅ ಶಾಸಕ ವೈ.ಸಂಪಂಗಿ ಅವರನ್ನು ಪಕ್ಷದ ಶಾಸಕ ಎಂದು ಬಿಜೆಪಿಯವರು ರಕ್ಷಿಸುವ ಯತ್ನ ಮಾಡಲಿಲ್ಲ. ತಮ್ಮ, ಅಣ್ಣ, ಅಪ್ಪ ಅಥವಾ ಬಂಧುಗಳೆಂದು ತಪ್ಪಿತಸ್ಥರನ್ನು ಕಾಪಾಡುವುದು ಸರಿಯಲ್ಲ. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬುದಾಗಿ ಹೇಳಿದರು. |