ಬಸ್ ಪ್ರಯಾಣ ದರ ಇಳಿಕೆ ದರದಲ್ಲಿ ಸರ್ಕಾರ ಪ್ರಯಾಣಿಕರ ಮೂಗಿಗೆ ತುಪ್ಪ ಸವರಿದೆ. ರಾಜಧಾನಿಯಲ್ಲಿ ಸಾಮಾನ್ಯ ಸಾರಿಗೆ ಹೊರತುಪಡಿಸಿ ಉಳಿದೆಲ್ಲ ಬಸ್ ಪ್ರಯಾಣ ದರ ಕಡಿತಗೊಳಿಸಲಾಗಿದ್ದು, ರಾಜ್ಯದ ಇತರೆಡೆ ಸಾಮಾನ್ಯ ಸಾರಿಗೆ ದರವನ್ನು ಇಳಿಸಲಾಗಿದೆ.
ಬಿಎಂಟಿಸಿ ಪ್ರಯಾಣ ದರದಲ್ಲಿ ಭಾರೀ ಇಳಿಕೆಯಾಗಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ. ಬಿಎಂಟಿಸಿ ಹಾಗೂ ರಾಜ್ಯ ಸಾರಿಗೆ ನಿಗಮದ ಮೂರು ವಿಭಾಗಗಳ ಬಸ್ ಪ್ರಯಾಣ ದರವನ್ನು ಸರಾಸರಿ ಶೇ 3.5 ರಷ್ಟು ಇಳಿಸಿರುವುದಾಗಿ ಸಾರಿಗೆ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ನಗರದ ಬಹುಪಾಲು ಪ್ರಯಾಣಿಕರು ಪಯಣಿಸುವ ಬಿಎಂಟಿಸ ಸಾಮಾನ್ಯ ಬಸ್ ದರ ಹಾಗೂ ಪಾಸ್ ದರವನ್ನು ಇಳಿಸುವ ಗೋಜಿಗೆ ಹೋಗಿಲ್ಲ. ಬದಲಿಗೆ ಖಾಲಿ ಸಂಚರಿಸುವ ಸುವರ್ಣ ಸಾರಿಗೆ ಹಾಗೂ ವೋಲ್ವೊ ಬಸ್ ಪ್ರಯಾಣ ದರವನ್ನು ಇಳಿಸಿದೆ.
ಸಾಮಾನ್ಯ ಬಸ್‌ಗಳ 23 ಸ್ಥಳಗಳ ನಡುವಿನ ಪ್ರಯಾಣ ದರವನ್ನು ಒಂಉ ರೂಪಾಯಿ ಇಳಿಸಿ ಬಿಎಂಟಿಸಿ ಸಂಸ್ಥೆ ಕೈ ತೊಳೆದುಕೊಂಡರೆ, ಸುವರ್ಣ ಬಸ್ ಪ್ರಯಾಣ ದರವನ್ನು ಶೇ. 20 ಹಾಗೂ ವೋಲ್ವೊ ವಜ್ರ ಬಸ್ ದರವನ್ನು ಶೇ 17 ರಷ್ಟು ಇಳಿಸಿದೆ. ಆದರೆ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವ ವಾಯುವಜ್ರ ಬಸ್ ದರ ಪರಿಷ್ಕರಿಸಿಲ್ಲ.
ನಗರದಲ್ಲಿರುವ ಪುಷ್ಟಕ್ ಹಾಗೂ ಸುವರ್ಣ ಬಸ್‌ಗಳ ಪ್ರಯಾಣ ದರವನ್ನು ಶೇ 18 ರಷ್ಟು ಇಳಿಸಿರುವ ಬಿಎಂಟಿಸಿ, ಸಾಮಾನ್ಯ(ಕಪ್ಪು ಮತ್ತು ಕೆಂಪು ಬೋರ್ಡ್) ಬಸ್‌ಗಳನ್ನುನಂಬಿಕೊಂಡಿರುವ ಪ್ರಯಾಣಿಕರಿಗೆ ಮೋಸ ಮಾಡಿದೆ.
ಸಾರಿಗೆ ನೌಕರರಿಗೆ 2008 ಜುಲೈ 1 ರಿಂದ ಅನ್ವಯವಾಗುವಂತೆ ಶೇ 4ರ ತುಟ್ಟಿ ಭತ್ಯೆ ಹೆಚ್ಚಿಸಲಾಗಿದ್ದರೆ, 2009 ರ ಜನವರಿ 1 ರಿಂದ ಮತ್ತೆ ಶೇ. 4 ರ ತುಟ್ಟಿ ಭತ್ಯೆ ನೀಡಬೇಕಾಗಿದ್ದು, ಇದರಿಂದ ಸಂಸ್ಥೆಗೆ ಹೊರೆಯಾಗದಂತೆ ದರ ಇಳಿಸಲಾಗಿದೆ ಎಂದು ಸಾರಿಗೆ ಸಚಿವ ಆರ್.ಅಶೋಕ್ ಹೇಳಿದ್ದಾರೆ. |