ನೈತಿಕ ಪೊಲೀಸಿಂಗ್ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸಲಾಗುವುದಿಲ್ಲ ಎಂದು ರಾಜ್ಯದ ನೂತನ ಪೊಲೀಸ್ ಮಹಾನಿರ್ದೇಶಕ ಡಾ.ಅಜಯ್ಕುಮಾರ್ ಸಿಂಗ್ ತಿಳಿಸಿದ್ದಾರೆ.
ಆರ್. ಶ್ರೀ ಕುಮಾರ್ ಅವರಿಂದ ಶನಿವಾರ ಅಧಿಕಾರ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಯೋತ್ಪಾದನೆ ಹಾಗೂ ನಕ್ಸಲ್ ಚಟುವಟಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹಾಗೆಂದು ಪ್ರತಿ ಠಾಣೆಗೆ ಎಕೆ 47 ನೀಡಬೇಕೆಂಬ ವಾದಕ್ಕೆ ಹುರುಳಿಲ್ಲ. ರಾಜ್ಯದಲ್ಲಿ ತರಬೇತಿ ಪಡೆದ ಸಾಕಷ್ಟು ಸಿಬ್ಬಂದಿ ಇದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
ನೊಂದವರಿಗೆ ನೆರವು ನನ್ನ ಅಧಿಕಾರಾವಧಿಯ ಧ್ಯೇಯ. ಕರ್ತವ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕೆಲ ನಿಲುವು ಹೊಂದಿದ್ದೇನೆ. ನನ್ನ ಆಡಳಿತಾವಧಿಯಲ್ಲಿ ವಜ್ರದಂತೆ ಕಠಿಣ ಹಾಗೂ ಹೂವಿನಂತೆ ಮೃದು ಎಂದರು.
ಭ್ರಷ್ಟಾಚಾರ ನನಗೆ ಒಂದು ಸವಾಲು. ಇಲಾಖೆಯಲ್ಲಿನ ಭ್ರಷ್ಟರಿಗೆ ಯಾವುದೇ ಬೆಂಬಲ ನೀಡುವುದಿಲ್ಲ. ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅದೇ ಕಾಲಕ್ಕೆ ಪ್ರಾಮಾಣಿಕರನ್ನು ಪ್ರೋತ್ಸಾಹಿಸಲಾಗುವುದು ಎಂದರು.
ಪೊಲೀಸ್ ಇಲಾಖೆಯಲ್ಲಿ ಆಗಬೇಕಾದ ಸುಧಾರಣೆಯ ಬಗ್ಗೆ ಮಾಹಿತಿ ಪಡೆಯಲು ಪೇದೆ, ಮುಖ್ಯಪೇದೆ, ಎಎಸ್ಐ ಹಾಗೂ ಪಿಎಸ್ಐಗಳಿಗೆ ಘಟಕ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗುವುದು. ಪ್ರತಿ ಘಟಕದಲ್ಲೂ ಉತ್ತಮವಾದ ಮೂರು ಪ್ರಬಂಧಗಳಿಗೆ ಮಾಹಿತಿ ನೀಡಲಾಗುವುದು ಎಂದು ಅವರು ತಮ್ಮ ಯೋಜನೆಯನ್ನು ಹೇಳಿಕೊಂಡರು. |