ನೈಸ್ ಸಂಸ್ಥೆ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ಸೂಚನೆ ಮೇರೆಗೆ ಸೋಮವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಖುದ್ದು ಹಾಜರಾಗಲು ಒಂದು ವೇಳೆ ಸಾಧ್ಯವಾಗದೆ ಇದ್ದರೆ ವಕೀಲರ ಮೂಲಕ ತಮ್ಮ ವಾದವನ್ನು ನ್ಯಾಯಾಲಯದ ಮುಂದೆ ಇಡಲಿದ್ದಾರೆ ಎಂದರು.
ಚಾಮರಾಜಪೇಟೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಸಂದರ್ಭದಲ್ಲಿ ಭಾಗವಹಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನೈಸ್ ಸಂಸ್ಥೆ ವಿರುದ್ಧ ಜೆಡಿಎಸ್ ಕಾನೂನು ಹೋರಾಟ ಮುಂದುವರಿಸಲಿದೆ ಎಂದು ಹೇಳಿದರು.
ನೈಸ್ ಸಂಸ್ಥೆ ಸಾವಿರಾರು ಕೋಟಿ ರೂ.ಗಳ ಹಗರಣ ಮಾಡಿದೆ ಎಂದು ಆರೋಪಿಸಿ ಮಾಜಿ ಪ್ರಧಾನಿ ದೇವೇಗೌಡ ಅವರು ಪುಸ್ತಕವೊಂದನ್ನು ಸಿದ್ದಪಡಿಸಿ ಅದನ್ನು ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳು ಸೇರಿದಂತೆ ಇತರ ನ್ಯಾಯಾಧೀಶರುಗಳಿಗೆ ಪ್ರತಿಯನ್ನು ರವಾನಿಸಿದ್ದರು.
ಗೌಡರು ಕಳುಹಿಸಿದ್ದ ಪುಸ್ತಕಕ್ಕೆ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ಅವರು ಅಚ್ಚರಿ ವ್ಯಕ್ತಪಡಿಸಿ, ಈ ಬಗ್ಗೆ ಏನಾದರು ಹೇಳುವುದಿದ್ದರೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಹೇಳುವಂತೆ ನೋಟಿಸ್ ಜಾರಿ ಮಾಡಿದ್ದರು. |