ಹಿಂದೂತ್ವ, ಹಿಂದೂತ್ವ ಅಂತ ಅಧಿಕಾರದ ಚುಕ್ಕಾಣಿ ಹಿಡಿದ ಭಾಜಪ, ಇದೀಗ ಹಿಂದೂತ್ವದ ರಕ್ಷಣೆಗೆ ಹೊರಟವರನ್ನೇ ಬಂಧಿಸತೊಡಗಿದೆ ಎಂದು ಕಿಡಿಕಾರಿರುವ ಶ್ರೀರಾಮಸೇನೆಯ ವರಿಷ್ಠ ಪ್ರಮೋದ್ ಮುತಾಲಿಕ್, ಹಿಂದುತ್ವವನ್ನು ಕೈಬಿಟ್ಟರೆ ಜನ ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಗೋಣಿಕೊಪ್ಪಲಿನಲ್ಲಿ ಈ ಹಿಂದೆ ನಡೆದ ಹಿಂದೂ ಸಮಾಜೋತ್ಸವದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಬಂಧಿತರಾಗಿರುವ ಮುತಾಲಿಕ್, ಅನಾರೋಗ್ಯದ ನಿಮಿತ್ತ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಜೈಲಿನ ವಾರ್ಡ್‌ನಲ್ಲಿ ವಿಶ್ರಾಂತಿ ಪಡೆಯುವ ಮಧ್ಯೆ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಮಮಂದಿರ ಹೆಸರಿನಲ್ಲಿ ಕೇಂದ್ರಕ್ಕೆ ಅಧಿಕಾರಕ್ಕೆ ಬಂದ ಎನ್‌ಡಿಎ, ಆನಂತರ ಉತ್ತರ ಪ್ರದೇಶದಲ್ಲಿ ನಡೆದ ಬೆಳವಣಿಗೆಗಳಿಂದ ಅಲ್ಲಿ ಬಿಜೆಪಿ ಸ್ಥಿತಿ ಏನಾಯಿತು ಎಂಬುದನ್ನು ಯಾರೂ ಮರೆಯಬಾರದು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೂಡ ಹಿಂದುತ್ವವನ್ನು ಮರೆತಲ್ಲಿ ಭವಿಷ್ಯದಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಕಟುವಾಗಿ ಎಚ್ಚರಿಕೆ ನೀಡಿದರು.
ಮಂಗಳೂರಿನ ಪಬ್ ಮೇಲೆ ದಾಳಿ ನಡೆಸಿರುವ ಶ್ರೀರಾಮಸೇನೆಯನ್ನು ನಿಷೇಧಿಸುವಂತೆ ವಕ್ಫ್ ಸಚಿವ ಮುಮ್ತಾಜ್ ಅಲಿಖಾನ್ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕರಾವಳಿಯಲ್ಲಿ ಕೆಎಫ್‌ಡಿ ಮತ್ತಿತರ ಸಂಘಟನೆಗಳು ಮಾಡುತ್ತಿರುವ ದೇಶದ್ರೋಹಿ ಚಟುವಟಿಕೆ ಏನು ಎಂಬುದರ ಬಗ್ಗೆ ಸಚಿವರು ಗಮನ ಹರಿಸಲಿ, ಅದು ಬಿಟ್ಟು ಶ್ರೀರಾಮಸೇನೆ ಬಗ್ಗೆ ಹೇಳಿಕೆ ನೀಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇಂದು ನ್ಯಾಯಾಲಯಕ್ಕೆ ಹಾಜರು: ಮಡಿಕೇರಿಯ ಗೋಣಿಕೊಪ್ಪಲಿನಲ್ಲಿ 2003ರಲ್ಲಿ ನಡೆದ ಹಿಂದೂ ಸಮಾಜೋತ್ಸವದಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇರೆಗೆ ಬಂಧಿತರಾಗಿರುವ ಮುತಾಲಿಕ್ ಅವರನ್ನು ಸೋಮವಾರ ವಿರಾಜಪೇಟೆಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
|