ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅವರ ಅಸಹಜ ಸಾವಿನ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ವಕೀಲ ಶೇಷಾದ್ರಿ ಅವರ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಶಿವಮೊಗ್ಗ ಸತ್ರ ನ್ಯಾಯಾಲಯ ಪ್ರಕರಣದ ತನಿಖೆ ನಡೆಸುವಂತೆ ದೊಡ್ಡಪೇಟೆ ಪೊಲೀಸರಿಗೆ ಸೂಚನೆ ನೀಡಿ ನ್ಯಾಯಾಲಯ ಆದೇಶಿಸಿದೆ.
ಮೈತ್ರಾದೇವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಸೇರಿದಂತೆ ಏಳು ಮಂದಿ ವಿರುದ್ಧ ಶಂಕೆ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಶೇಷಾದ್ರಿಯವರು ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದಾರೆ. ನ್ಯಾಯಾಲಯ ನನ್ನ ದೂರು ಸ್ವೀಕರಿಸಿ ಮರು ತನಿಖೆಗೆ ಆದೇಶ ನೀಡಿರುವುದರಿಂದ ಸಂತೋಷವಾಗಿದೆ. ಆದರೆ ಇಷ್ಟಕ್ಕೇ ನನ್ನ ಕೆಲಸ ಮುಗಿಯುವುದಿಲ್ಲ. ಯಡಿಯೂರಪ್ಪನವರ ಪತ್ನಿ ಸಾವಿನ ಪ್ರಕರಣದ ನನ್ನ ಹೋರಾಟ ಮುಂದುವರಿಯಲಿದೆ ಎಂದಿರುವ ಅವರು, ಕಂಬಿ ಎಣಿಸುವಂತೆ ಮಾಡುವುದೇ ನನ್ನ ಅಂತಿಮ ಗುರಿ ಎಂದಿದ್ದಾರೆ.
ಮೈತ್ರಾದೇವಿ 2004ರ ಅಕ್ಟೋಬರ್ 16 ರಂದು ನೀರಿನ ತೊಟ್ಟಿಗೆ ಬಿದ್ದು ಮೃತಪಟ್ಟ ಘಟನೆಯ ಮರು ತನಿಖೆ ನಡೆಸುವಂತೆ ನ್ಯಾಯಾಲಯ ದೊಡ್ಡಪೇಟೆ ಪೊಲೀಸರಿಗೆ ಆದೇಶಿಸಿದೆ. ಘಟನೆ ನಡೆದ ಐದು ವರ್ಷಗಳ ನಂತರ ದೂರು ದಾಖಲಿಸುತ್ತಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆಗೆ, ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಗೇರುವವರೆಗೆ ನಾನು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆ ನಂತರ ನನ್ನ ಆತ್ಮಸಾಕ್ಷಿ ಸುಮ್ಮನಿರಲಿಲ್ಲ. ತಡವಾದರೂ ನನ್ನ ನಿರ್ಧಾರ ಸಮಾಧಾನ ತಂದಿದೆ. ಮುಂಜಾಗ್ರತೆಯಾಗಿ ನನ್ನ ಮನೆಗೆ ಪೊಲೀಸ್ ರಕ್ಷಣೆ ಕೋರಲು ನಿರ್ಧರಿಸಿದ್ದೇನೆ ಎಂದು ಶೇಷಾದ್ರಿ ತಿಳಿಸಿದ್ದಾರೆ.
ಯಾವುದೇ ತನಿಖೆಗೂ ಸಿದ್ದ ಯಡಿಯೂರಪ್ಪ: ಯಾವುದೇ ಆಪಾದನೆ ಇದ್ದರೂ ಕೂಡ ಅದರ ತನಿಖೆಯನ್ನು ಎದುರಿಸಲು ತಾನು ಸಿದ್ದ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಪತ್ನಿ ಸಾವಿನ ಪ್ರಕರಣದ ಮರು ತನಿಖೆ ಕುರಿತಂತೆ ತಾನು ಏನನ್ನೂ ಹೇಳಲಾರೆ, ಅದೀಗ ನ್ಯಾಯಾಲಯ ಆದೇಶ ನೀಡಿದೆ. ತನಿಖೆ ತಾನು ಸಿದ್ದ ಎಂದಿದ್ದಾರೆ. |