ಮಂಗಳೂರಿನಲ್ಲಿ ಪಬ್ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ "ಸರಿಯಾಗಿ" ವರದಿ ನೀಡದ ರಾಷ್ಟ್ರೀಯ ಮಹಿಳಾ ಆಯೋಗದ ವರದಿಯಿಂದ ವಿಚಲಿತರಾದಂತೆ ಕಂಡು ಬಂದಿರುವ ಕೇಂದ್ರ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಸಚಿವಾಲಯವು, ಇದೀಗ ಮತ್ತೊಂದು ಸತ್ಯಶೋಧನಾ ತಂಡವನ್ನು ಮಂಗಳೂರಿಗೆ ಅಟ್ಟಿದ್ದು, ಕಿರಣ್ ಛಡ್ಡಾ ಅವರು ಈ ದ್ವಿಸದಸ್ಯ ಸಮಿತಿಯ ನೇತೃತ್ವ ವಹಿಸಿದ್ದಾರೆ.
ಪಬ್ ಪ್ರಕರಣದ ಬಗ್ಗೆ 'ಹೊಸ ವರದಿ' ನೀಡುವಂತೆ ಕಿರಣ್ ಛಡ್ಡಾ ಆಯೋಗಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ರೇಣುಕಾ ಚೌಧುರಿ ಆದೇಶಿಸಿದ್ದುರ, ಭಾನುವಾರವೇ ಈ ಆಯೋಗವು ಮಂಗಳೂರಿಗೆ ತಲುಪಿದೆ. ಜನವರಿ 24ರಂದು ಪಬ್‌ನಲ್ಲಿದ್ದ ಮಹಿಳೆಯರ ಮೇಲೆ ಶ್ರೀರಾಮ ಸೇನೆ ಸದಸ್ಯರು ದಾಳಿ ಮಾಡಿದ್ದ ಪ್ರಕರಣದಲ್ಲಿ, ಪಬ್‌ನಲ್ಲಿ ಸೂಕ್ತ ಭದ್ರತಾ ವ್ಯವಸ್ಥೆ ಇರಲಿಲ್ಲ, ಅದರ ಪರವಾನಗಿಯನ್ನೇ ರದ್ದುಪಡಿಸಬೇಕು ಎಂದು ನಿರ್ಮಲಾ ವೆಂಕಟೇಶ್ ನೇತೃತ್ವದ ಮಹಿಳಾ ಆಯೋಗ ತಂಡವು ವರದಿ ಸಲ್ಲಿಸಿರುವುದು ಇಲ್ಲಿ ಉಲ್ಲೇಖಾರ್ಹ.
ಎಲ್ಲ ಆರೋಪಿಗಳನ್ನು ಮತ್ತು ಸಾಧ್ಯವಾದಲ್ಲಿ ದಾಳಿಗೆ ತುತ್ತಾದವರನ್ನೂ ಭೇಟಿ ಮಾಡಿ ವರದಿ ಸಂಗ್ರಹಿಸುವುದಾಗಿ ತಿಳಿಸಿರುವ ಕಿರಣ್ ಛಡ್ಡಾ, ಸೋಮವಾರವೇ ಕೇಂದ್ರ ಸಚಿವರಿಗೆ ವರದಿ ಒಪ್ಪಿಸಲಿದ್ದಾರೆಂದು ತಿಳಿದುಬಂದಿದೆ. |