ಧರ್ಮ, ಸಂಸ್ಕೃತಿಯ ರಕ್ಷಣೆ ಅಗತ್ಯವಾಗಿ ಆಗಬೇಕಾಗಿದೆ. ಆ ನೆಲೆಯಲ್ಲಿ ಫೆ.14ರ ಪ್ರೇಮಿಗಳ ದಿನಾಚರಣೆ ಆಚರಿಸಲು ಬಿಡುವುದಿಲ್ಲ, ಒಂದು ವೇಳೆ ಅದನ್ನು ಆಚರಿಸಲು ಮುಂದಾದರೆ ನಮ್ಮ ಸಂಘಟನೆಯಿಂದ ಪ್ರತಿಭಟನೆ ನಡೆಸುವುದು ಖಚಿತ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮತ್ತೊಮ್ಮೆ ಗುಡುಗಿದ್ದಾರೆ.
ಮಂಗಳೂರಿನ ಎಮ್ನೇಶಿಯ ಪಬ್ ಮೇಲಿನ ದಾಳಿ ಪ್ರಕರಣದ ಸಮರ್ಥನೆ, ದಾವಣಗೆರೆಯಲ್ಲಿ ಪ್ರಚೋದನಕಾರಿ ಭಾಷಣದ ಆರೋಪದ ಮೇಲೆ ಜೈಲಿನಿಂದ ಜೈಲಿಗೆ ಹೋಗುತ್ತಿರುವ ಮುತಾಲಿಕ್, ಇದೀಗ ಗೋಣಿಕೊಪ್ಪಲಿನಲ್ಲಿ ಪ್ರಚೋದನಾಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಡಿಕೇರಿ ಪೊಲೀಸರ ವಶದಲ್ಲಿರುವ ಅವರು, ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಿಂದೂತ್ವ, ಹಿಂದೂತ್ವ ಅಂತ ಅಧಿಕಾರದ ಗದ್ದುಗೆ ಏರಿರುವ ಭಾರತೀಯ ಜನತಾ ಪಕ್ಷ , ಹಿಂದೂತ್ವದ ರಕ್ಷಣೆಗೆ ಹೊರಟ ನಮ್ಮನ್ನೇ ಬಂಧಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿರುವ ಅವರು, ಬಿಜೆಪಿಯವರು ಅವರವರ ಮೂಗಿನ ನೇರಕ್ಕೆ ವರ್ತಿಸುತ್ತಿದ್ದಾರೆ.
ರಾಜ್ಯದಲ್ಲಿ ಪಬ್ ಸಂಸ್ಕೃತಿಯನ್ನು ಮುಂದುವರಿಯಲು ಸೇನೆ ಬಿಡುವುದಿಲ್ಲ, ನಮ್ಮ ಹೋರಾಟ ನಿರಂತರವಾಗಲಿದೆ. ಅಲ್ಲದೇ ಪಬ್‌ಗಳನ್ನು ಮುಚ್ಚಿಸಲು ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಯನ್ನು ಸ್ವಾಗತಿಸುವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು. |