ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವುದಾಗಿ ಕಾಂಗ್ರೆಸ್ ಹೈಕಮಾಂಡ್ ಭರವಸೆ ನೀಡಿದ್ದು ಈಗ ಅಂತಿಮ ನಿರ್ಣಯವನ್ನು ಕಾದು ನೋಡುತ್ತಿರುವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ಇಲ್ಲ ಎಂದು ಹೇಳಿದರು. ತಾವು ಕಾಂಗ್ರೆಸ್‌ನಲ್ಲಿ ಸೇರ್ಪಡೆಗೊಂಡ ಸಂದರ್ಭದಲ್ಲಿ ಅಖಿಲ ಭಾರತ ಪ್ರಗತಿಪರ ಜನತಾದಳವನ್ನು ಕಾಂಗ್ರೆಸ್‌ನಲ್ಲಿ ವಿಲೀನಗೊಳಿಸಲಾಗಿದ್ದರೂ ತಮಗಾಗಲಿ ಅಥವಾ ತಮ್ಮ ಬೆಂಬಲಿಗರಿಗಾಗಲಿ ಇದುವರೆಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಿಲ್ಲ ಎಂಬುದನ್ನು ಪಕ್ಷದ ವರಿಷ್ಠರಿಗೆ ಮನವರಿಕೆ ಮಾಡಿಕೊಟ್ಟು ಬಂದಿರುವುದಾಗಿ ತಿಳಿಸಿದರು.
ತಮ್ಮ ಬೆಂಬಲಿಗರಾದ ಕೇಂದ್ರದ ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಹಾಗೂ ಲೋಕಸಭಾ ಸದಸ್ಯ ಆರ್.ಎಲ್.ಜಾಲಪ್ಪ ಅವರೊಂದಿಗೆ ಶುಕ್ರವಾರ ರಾತ್ರಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಸಿದ್ದು ಹೈಕಮಾಂಡ್ ನೀಡಿದ ಭರವಸೆಯ ಬಗ್ಗೆ ಮಾತ್ರ ಮಾಹಿತಿ ಬಿಟ್ಟು ಕೊಡಲಿಲ್ಲ. ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿ ಸದಸ್ಯತ್ವ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. |