ಆಗುಂಬೆ ಸಮೀಪದ ಮನೆಯೊಂದರ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿದ ನಕ್ಸಲೀಯರ ತಂಡವೊಂದು, ದಂಪತಿಗಳನ್ನು ಕಟ್ಟಿಹಾಕಿ ಮನೆ ಮತ್ತು ಬೈಕ್ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿರುವ ಘಟನೆ ನಡೆದಿದೆ.
ಸುಮಾರು 9ಮಂದಿಯ ನಕ್ಸಲೀಯರ ತಂಡ ಏಕಾಏಕಿ ಮನೆಯೊಂದಕ್ಕೆ ನುಗ್ಗಿ, ದಂಪತಿಗಳಿಬ್ಬರನ್ನು ಮನೆಯ ಹೊರಗಿರುವ ಬಾವಿ ಸಮೀಪ ಕಟ್ಟಿಹಾಕಿ. ಅವರ ಎದುರೇ ಮನೆ, ಬೈಕ್ಗಳಿಗೆ ಬೆಂಕಿ ಹಚ್ಚಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮನೆಯಲ್ಲಿದ್ದ ಲಕ್ಷಾಂತರ ರೂ.ಬೆಲೆಬಾಳುವ ಚಿನ್ನಾಭರಣಗಳನ್ನು ದೋಚಿಕೊಂಡು ಹೋಗಿರುವುದಾಗಿಯೂ ಮನೆಯವರು ಆರೋಪಿಸಿದ್ದಾರೆ. ಆದರೆ ಈ ಕೃತ್ಯವನ್ನು ನಕ್ಸಲೀಯರೇ ನಡೆಸಿದ್ದಾರೋ ಅಥವಾ ಬೇರೆ ಯಾರದ್ದೋ ಕೃತ್ಯವೇ ಎಂಬ ಬಗ್ಗೆ ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ.
ಪೊಲೀಸರ ವಿರುದ್ಧ ಆಕ್ರೋಶ: ನಕ್ಸಲೀಯರು ದಾಳಿ ನಡೆಸಿದ ಮನೆಗೂ ಹಾಗೂ ಪೊಲೀಸ್ ಠಾಣೆಗೂ ಕೇವಲ 10ನಿಮಿಷಗಳ ಹಾದಿ. ಆದರೆ ಪೊಲೀಸರಿಗೆ ಮಾಹಿತಿ ನೀಡಿ ಕೆಲವು ಗಂಟೆಗಳಾದರೂ ಒಬ್ಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರು ಈ ರೀತಿ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ಕಿಡಿಕಾರಿದ್ದಾರೆ. ಅಲ್ಲದೇ ಸ್ಥಳೀಯ ಜನರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ. |