ಮಾನವಕುಲಕ್ಕೆ ಸಿದ್ದಗಂಗಾಶ್ರೀಗಳ ಕೊಡುಗೆ ಅಪಾರವಾದದ್ದು, ಸಮಾಜದ ಏಳಿಗೆಗೆ ಶ್ರೀಗಳಂತೆ ಪ್ರತಿಯೊಬ್ಬರು ನಿಸ್ವಾರ್ಥ ಸೇವೆ ಮಾಡಬೇಕು ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕರೆ ನೀಡಿದರು.ನಡೆದಾಡುವ ದೇವರೆಂದೇ ಹೆಸರು ಗಳಿಸಿರುವ ತುಮಕೂರಿನ ಡಾ.ಶಿವಕುಮಾರ ಶ್ರೀಗಳ ಜನ್ಮಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರಂಭದಲ್ಲಿ ಕನ್ನಡದಲ್ಲಿ ಶುಭಾಶಯ ಕೋರುವ ಮೂಲಕ ನೆರೆದ ಸಹಸ್ರರಾರು ಭಕ್ತರ ಗಮನ ಸೆಳೆದರು.ತ್ರಿವಿಧ ದಾಸೋಹದ ಮೂಲಕ ಯುವ ಪೀಳಿಗೆಯನ್ನು ಉತ್ತಮ ಮೌಲ್ಯಗಳ ಮೇಲೆ ನಿರ್ಮಾಣ ಮಾಡುವ ಸಿದ್ದಗಂಗಾ ಮಠದ ಸೇವೆ ಇತರರಿಗೆ ಮಾದರಿ ಇಂತಹ ಕ್ಷೇತ್ರದ ದರ್ಶನ ಮಾಡಿದ್ದು ನನ್ನ ಪುಣ್ಯ ಎಂದು ಹೇಳಿದರು.ಮಠದಲ್ಲಿ ಶಿಕ್ಷಣ ಪಡೆದ ಹಳೆ ವಿದ್ಯಾರ್ಥಿಗಳು ಸಮಾಜ ಸೇವೆಯನ್ನೇ ಗುರಿಯಾಗಿಟ್ಟುಕೊಂಡು ಕೆಲಸ ಮಾಡಿದರೆ ಕಲಿತ ಸಂಸ್ಥೆಗೆ ಕೀರ್ತಿ ತರಬಹುದು ಎಂದು ಪಾಟೀಲ್ ಸಲಹೆ ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಧಾನಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಜನಸಾಗರ: ಶ್ರೀಗಳ ಜನ್ಮಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ರಾಷ್ಟ್ರೀಯ ಹೆದ್ದಾರಿ 4ರಿಂದ ಆರಂಭಿಸಿ ಮಠದ ಮುಖ್ಯ ದ್ವಾರದವರೆಗೆ ರಸ್ತೆ ಇಕ್ಕೆಲಗಳಲ್ಲಿ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಮುಂಜಾನೆ ನಾಲ್ಕು ಗಂಟೆಯಿಂದಲೇ ಸುತ್ತಮುತ್ತಲ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿದ್ದರು. |