ನೈಸ್ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ರಾಜ್ಯ ಹೈಕೋರ್ಟ್ ಸೋಮವಾರ ಲೋಕಾಯುಕ್ತಕ್ಕೆ ಆದೇಶ ನೀಡಿದೆ.ಲೋಕಾಯುಕ್ತ ತನಿಖೆ ಪೂರ್ಣಗೊಳ್ಳುವವರೆಗೆ ಮಾಜಿ ಪ್ರಧಾನಿ ದೇವೇಗೌಡರಾಗಲಿ ಅಥವಾ ಇತರ ಗಣ್ಯರಾಗಲಿ ಅವ್ಯವಹಾರ ನಡೆದಿರುವ ಕುರಿತು ಮಾಧ್ಯಮಗಳ ಮುಂದಾಗಲಿ ಅಥವಾ ಬಹಿರಂಗ ಸಮಾವೇಶದಲ್ಲಾಗಲಿ ಬಾಯಿ ಬಿಡದಂತೆ ಕಟ್ಟುನಿಟ್ಟಿನ ಆದೇಶ ನೀಡಿದೆ.ನೈಸ್ ಹಗರಣದ ತನಿಖೆಯನ್ನು ಲೋಕಾಯುಕ್ತಕ್ಕೆ ಒಪ್ಪಿಸಿರುವುದನ್ನು ನೈಸ್ ಪರ ವಕೀಲ ಆಕ್ಷೇಪ ವ್ಯಕ್ತಪಡಿಸಿದ್ದನ್ನು ನ್ಯಾಯಪೀಠ ತಳ್ಳಿಹಾಕಿತು. ಮಾಜಿ ಪ್ರಧಾನಿ ಗೌಡರು ತಮ್ಮದೇನಾದರೂ ವಾದವಿದ್ದರೆ ಅದನ್ನು ಲೋಕಾಯುಕ್ತ ತನಿಖೆಯಲ್ಲಿ ಹೇಳಲಿ ಎಂದು ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ಮತ್ತು ನ್ಯಾಯಮೂರ್ತಿ ವಿ.ಜಿ.ಸಭಾಯತ್ ಅವರನ್ನೊಳಗೊಂಡ ವಿಭಾಗೀಯ ಪೀಠ ಸೂಚಿಸಿದೆ.ನೈಸ್ ರಸ್ತೆ ಕಾಮಗಾರಿ ಪ್ರಕ್ರಿಯೆ ಇಂದು ನಿನ್ನೆಯದಲ್ಲ, ಸುಮಾರು ವರ್ಷಗಳಿಂದ ನಡೆಯುತ್ತ ಬಂದಿದೆ. ಅನೇಕ ಸರ್ಕಾರಗಳು ಬಂದು ಹೋಗಿವೆ. ಹೀಗಾಗಿ ಇದಕ್ಕೆ ಸಂಬಂಧಿಸಿದ ಆಯಾ ಸರ್ಕಾರದ ವ್ಯಕ್ತಿಗಳು, ಅಧಿಕಾರಿಗಳು ಕೂಡ ತನಿಖೆಗೆ ಹೊಣೆಯಾಗುತ್ತಾರೆ ಎಂದು ಪೀಠ ಹೇಳಿದೆ.ಇದಕ್ಕೂ ಮುನ್ನ ದೇವೇಗೌಡರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಸುರೇಂದ್ರದೇಸಾಯಿ ಮತ್ತು ಡಿ.ಎಲ್.ಜಗದೀಶ್ ಅವರು ತಮ್ಮ ಆರೋಪಗಳನ್ನು ಪ್ರಮಾಣ ಪತ್ರಗಳ ಮೂಲಕ ಸಲ್ಲಿಸುವುದಾಗಿ ಹೇಳಿದರು.ಇದನ್ನು ತಳ್ಳಿಹಾಕಿದ ಪೀಠ ಮಾಜಿ ಪ್ರಧಾನಿಗಳು ಬರೆದ ಪತ್ರ ಹಾಗೂ ಪ್ರಕಟಿಸಿದ ಪುಸ್ತಕ ಅಷ್ಟೇ ಸಾಕು ಎಂದು ಹೇಳಿತು.ನೈಸ್ ಸಂಸ್ಥೆ 30ಸಾವಿರಕ್ಕೂ ಅಧಿಕ ಕೋಟಿ ರೂ.ಗಳ ಹಗರಣ ಮಾಡಿದೆ ಎಂದು ಆರೋಪಿಸಿ ಮಾಜಿ ಪ್ರಧಾನಿ ದೇವೇಗೌಡ ಅವರು ಪುಸ್ತಕವೊಂದನ್ನು ಸಿದ್ದಪಡಿಸಿ ಅದನ್ನು ಹೈಕೋರ್ಟ್‌ನ ಮುಖ್ಯನ್ಯಾಯಮೂರ್ತಿಗಳು ಸೇರಿದಂತೆ ಇತರ ನ್ಯಾಯಾಧೀಶರುಗಳಿಗೆ ಪ್ರತಿಯನ್ನು ರವಾನಿಸಿದ್ದರು.ಗೌಡರು ಕಳುಹಿಸಿದ್ದ ಪುಸ್ತಕಕ್ಕೆ ರಾಜ್ಯ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಪಿ.ಡಿ.ದಿನಕರನ್ ಅವರು ಅಚ್ಚರಿ ವ್ಯಕ್ತಪಡಿಸಿ, ಈ ಬಗ್ಗೆ ಏನಾದರು ಹೇಳುವುದಿದ್ದರೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ಹೇಳುವಂತೆ ನೋಟಿಸ್ ಜಾರಿ ಮಾಡಿದ್ದರು. |