ಹೈಕಮಾಂಡ್ ಸಿದ್ದರಾಮಯ್ಯ ಅವರನ್ನು ಕೆಪಿಸಿಸಿಗೆ ಅಧ್ಯಕ್ಷರನ್ನಾಗಿ ಮಾಡಿದರೂ ನನ್ನ ತಕರಾರಿಲ್ಲ ನಾವು ಶಿಸ್ತಿನ ಸಿಪಾಯಿಗಳು ಎಂದು ಕೆಪಿಸಿಸಿ ಅಧ್ಯಕ್ಷ ಆರ್.ವಿ.ದೇಶಪಾಂಡೆ ಹೇಳಿದ್ದಾರೆ.
ಸಿದ್ದರಾಮಯ್ಯ ಕಳೆದ ಚುನಾವಣೆಯಲ್ಲಿ ಪ್ರಚಾರಕ್ಕೆ ಬರಲಿಲ್ಲ. ಅವರ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವೇನಿಲ್ಲ. ಸಿದ್ದರಾಮಯ್ಯ, ಜಾಲಪ್ಪ ಹಾಗೂ ಅಂಬರೀಷ್ ಅವರೆಲ್ಲರ ಬಗ್ಗೆ ಗೌರವ ಪ್ರೀತಿ ಇದೆ. ಕಳೆದ ವಿಧಾನಸಭೆ ಉಪಚುನಾವಣೆಯಲ್ಲಿ ಪ್ರಚಾರಕ್ಕೆ ಬಾರದ ಕಾರಣ ಹಾಗೂ ಬಿಜೆಪಿಯಲ್ಲಿದ್ದ ಗಣಿ ಹಣ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎಂದರು.
ಮಂಗಳೂರು ಪಬ್ ದಾಳಿಯನ್ನು ತೀವ್ರವಾಗಿ ಖಂಡಿಸಿದ ದೇಶಪಾಂಡೆ, ಪಬ್ ಮೇಲೆ ದಾಳಿ ಮಾಡುವುದೇ ಭಾರತೀಯ ಸಂಸ್ಕೃತಿಯೇ? ಎಂದು ಪ್ರಶ್ನಿಸಿದರು. ಸರ್ಕಾರವೇ ಪಬ್‌ಗಳಿಗೆ ಪರವಾನಿಗೆ ನೀಡಿದ್ದು, ಅದನ್ನು ರದ್ದು ಮಾಡಲಿ ಎಂದು ಸವಾಲು ಹಾಕಿದರು.
ಲೋಕಸಭೆಗೆ ತಮ್ಮ ಪುತ್ರ ಪ್ರಶಾಂತ್ ದೇಶಪಾಂಡೆ ಸ್ಪರ್ಧಿಸುವ ಕುರಿತಂತೆ ಮಾತನಾಡಿದ ಅವರು, 25 ವರ್ಷ ತುಂಬಿದ ಯಾವುದೇ ಭಾರತೀಯ ಕೂಡಾ ಅರ್ಜಿ ಹಾಕಬಹುದು. ಆದರೆ ಅರ್ಜಿ ಹಾಕಿದವರಿಗೆಲ್ಲ ಟಿಕೆಟ್ ಸಿಗದು. ಇಲ್ಲಿ ಮೆರಿಟ್ ಆಧಾರದ ಮೇಲೆಯೇ ಟಿಕೆಟ್ ಲಭಿಸಲಿದೆ ಎಂದರು.
ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗಾಗಿ ನೇಮಕಗೊಂಡ 14 ಪ್ರಮುಖರ ತಂಡಗಳು ಫೆ.4ರಿಂದ ಒಂದು ತಿಂಗಳ ಕಾಲ ರಾಜ್ಯಾದ್ಯಂತ ಪ್ರವಾಸ ಮಾಡಲಿವೆ. ಎರಡು ವಿಧಾನಸಭೆ ಕ್ಷೇತ್ರಕ್ಕೆ ಒಬ್ಬರಂತೆ ನೇಮಕವಾದ ತಂಡ 28 ಲೋಕಸಭಾ ಕ್ಷೇತ್ರದಲ್ಲೂ ಸಂಚರಿಸಲಿವೆ.
|