ಎಲ್ಲಾ ನಿಯಮಗಳನ್ನು ಉಲ್ಲಂಘನೆ ಮಾಡಿ ಗರುಡಾ ಮಾಲ್ ನಿರ್ಮಿಸಿರುವ ಮೇವರಿಕ್ ಸಂಸ್ಥೆಯನ್ನು ಕಪ್ಪುಪಟ್ಟಿ (ಬ್ಲ್ಯಾಕ್ ಲಿಸ್ಟ್)ಗೆ ಸೇರಿಸಬೇಕು ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತ ಅವರು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗರುಡಾಮಾಲ್‌ಗೆ ಕೇವಲ 4 ಅಂತಸ್ತುಗಳಿಗೆ ಮಾತ್ರ ಅನುಮತಿ ನೀಡಲಾಗಿತ್ತು. ಇಲ್ಲಿನ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಅರ್ಧ ಪಾಲಿಕೆಗೆ ಸೇರಬೇಕೆಂದು ತೀರ್ಮಾನಿಸಲಾಗಿತ್ತು. ಆದರೆ ಸಂಸ್ಥೆಯೇ ಪೂರ್ಣ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದು, ಪಾಲಿಕೆಗೆ ಶೇ.49 ರಷ್ಟು ಮೊತ್ತವನ್ನು ಮಾತ್ರ ಭರಿಸುತ್ತಿದೆ. ಇದರಿಂದ ಪಾಲಿಕೆಗೆ ಕೋಟ್ಯಂತರ ರೂ.ಗಳ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.
ಮೇವರಿಕ್ ಸಂಸ್ಥೆ ಗರುಡಾ ಮಾಲ್‌ನಲ್ಲಿ 11 ಅಂತಸ್ತು ಕಟ್ಟಿದೆ. ನಿಯಮಬಾಹಿರವಾಗಿರುವ 7 ಅಂತಸ್ತುಗಳನ್ನು ಕೂಡಲೇ ಧ್ವಂಸ ಮಾಡಬೇಕು. ಈ ಸಂಸ್ಥೆಯ ಅವ್ಯವಹಾರದ ಬಗ್ಗೆ ಲೋಕಾಯುಕ್ತರಿಗೆ ತನಿಖೆಯನ್ನು ಸರ್ಕಾರ ವಹಿಸಿದೆ. ಲೋಕಾಯುಕ್ತರು ಬಯಸಿದಲ್ಲಿ ನನ್ನಲ್ಲಿರುವ ಎಲ್ಲಾ ದಾಖಲೆಗಳನ್ನು ನೀಡಿ ಸಹಕರಿಸಲು ಸಿದ್ಧವೆಂದು ವಿವರಿಸಿದರು.
ಈಜಿಪುರದಲ್ಲಿ ಬಡವರಿಗೆ ಮನೆಗಳನ್ನು ನಿರ್ಮಿಸಲು 14 ಎಕರೆ ಜಾಗ ನೀಡಲಾಗಿದೆ. ಆದರೆ ಈ ಸಂಸ್ಥೆಯ ಹಿನ್ನೆಲೆಯನ್ನು ಗಮನಿಸಿ ಸರ್ಕಾರ ತೀರ್ಮಾನಿಸಬೇಕಾಗಿತ್ತು ಎಂದರು. |