ಮುಖ್ಯಮಂತ್ರಿ ಪದವಿಯ ಆಕಾಂಕ್ಷಿ ನಾನಲ್ಲ. ನನಗೆ ಅಂತಹ ಮಹತ್ವಾಕಾಂಕ್ಷೆಯೂ ಇಲ್ಲ ಎಂದು ಸಾರಿಗೆ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಕಳೆದ 30 ವರ್ಷಗಳಿಂದ ಬಿಜೆಪಿ ಕಾರ್ಯಕರ್ತನಾಗಿದ್ದು, ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಿರುವುದಲ್ಲದೆ, ಎರಡನೇ ಬಾರಿ ಸಚಿವನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಪಕ್ಷದ ವರಿಷ್ಠರು ನೀಡಿರುವ ಸಚಿವ ಖಾತೆಯನ್ನು ನಿಭಾಯಿಸಲು ಶ್ರಮಿಸುತ್ತಿದ್ದೇನೆ ಎಂದರು. ಪಕ್ಷದ ಮತ್ತು ಸರ್ಕಾರದ ಯುವ ಸಚಿವನಾಗಿ ನನ್ನ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸುವತ್ತ ಗಮನ ಹರಿಸುತ್ತಿದ್ದೇನೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ನನಗೆ ವಹಿಸಿರುವ ಜವಾಬ್ದಾರಿಗಿಂತ ಹೆಚ್ಚಿನ ಪದವಿಯ ಆಕಾಂಕ್ಷಿ ನಾನಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರೇ ನನ್ನ ಪ್ರಶ್ನಾತೀತ ನಾಯಕರು ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಕುಣಿಗಲ್‌ನಲ್ಲಿ ಏರ್ಪಡಿಸಿದ್ದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಅವರು ಮಾತನಾಡಿ, ಸಾರಿಗೆ ಸಚಿವ ಆರ್.ಅಶೋಕ್ ಒಕ್ಕಲಿಗರ ನಾಯಕ ಎಂದು ಬಿಂಬಿಸಿದ್ದಲ್ಲದೇ ಮುಂದಿನ ಮುಖ್ಯಮಂತ್ರಿ ಎಂದು ಹೇಳಿದ ಹಿನ್ನೆಲೆಯಲ್ಲಿ ಸಚಿವ ಅಶೋಕ್ ಈ ಸ್ಪಷ್ಟನೆ ನೀಡಿದ್ದಾರೆ.
|