ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಸಾವಿನ ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ವರಿಷ್ಠ ಎಸ್.ಬಂಗಾರಪ್ಪ ಆಗ್ರಹಿಸಿದ್ದಾರೆ.
ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಸಾವಿನ ಪ್ರಕರಣದ ಸುತ್ತ ಹಲವಾರು ಅನುಮಾನಗಳ ಹುತ್ತ ಸುತ್ತಿಕೊಂಡಿದ್ದು, ಯಡಿಯೂರಪ್ಪ ಅವರ ವಿರುದ್ಧ ಶಿವಮೊಗ್ಗ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ಕೂಡ ದಾಖಲಾಗಿತ್ತು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿ ಅವರ ಅಸಹಜ ಸಾವಿನ ಪ್ರಕರಣವನ್ನು ಮರು ತನಿಖೆ ನಡೆಸುವಂತೆ ವಕೀಲ ಶೇಷಾದ್ರಿ ಅವರ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಶಿವಮೊಗ್ಗ ಸತ್ರ ನ್ಯಾಯಾಲಯ ಪ್ರಕರಣದ ತನಿಖೆ ನಡೆಸುವಂತೆ ದೊಡ್ಡಪೇಟೆ ಪೊಲೀಸರಿಗೆ ಸೋಮವಾರ ಆದೇಶ ನೀಡಿತ್ತು.
ಮೈತ್ರಾದೇವಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಸೇರಿದಂತೆ ಏಳು ಮಂದಿ ವಿರುದ್ಧ ಶಂಕೆ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಶೇಷಾದ್ರಿಯವರು ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದ್ದರು.
ಇದೀಗ ಯಡಿಯೂರಪ್ಪ ಅವರ ಪತ್ನಿ ಅಸಹಜ ಸಾವಿನ ಕುರಿತಂತೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ, ಸಿಬಿಐ ತನಿಖೆ ನಡೆಸುವಂತೆ ಒತ್ತಾಯಿಸುವ ಮೂಲಕ ಈ ಪ್ರಕರಣ ಕೂಡ ರಾಜಕೀಯ ತಿರುವು ಪಡೆಯತೊಡಗಿದೆ. |