ಶಾಸಕರ ಭವನದಲ್ಲಿ ಲಂಚ ಪಡೆಯುತ್ತಿದ್ದ ವೇಳೆಯಲ್ಲೇ ಲೋಕಾಯುಕ್ತರ ಬಲೆಗೆ ಸಿಕ್ಕಿಬಿದ್ದಿದ್ದ ಕೆಜಿಎಫ್ ಶಾಸಕ ವೈ.ಸಂಪಂಗಿ ಅವರ ಅನುಪಸ್ಥಿತಿಯಲ್ಲಿ ವಿಶೇಷ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.
ಅನಾರೋಗ್ಯದ ನೆಪವೊಡ್ಡಿ ಕೆಲವು ದಿನಗಳಿಂದ ನಿಮಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಾಸಕ ವೈ.ಸಂಪಂಗಿ, ಇಂದೂ ಕೂಡ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದರು. ಅವರ ಪರ ವಕೀಲ ಚಂದ್ರಮೌಳಿ ಅವರು ಹಾಜರಾಗಿದ್ದು, ನಗರದ 24ನೇ ಹೆಚ್ಚುವರಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಜಾಮೀನು ನೀಡಿದರು.
ಕೋಲಾರದ ಕೆಜಿಎಫ್‌ನ ಭೂವಿವಾದದ ಕುರಿತು ಫರೂಕ್ ಎಂಬವರ ಮೇಲೆ ಕ್ರಿಮಿನಲ್ ದೂರು ದಾಖಲಾಗಿತ್ತು. ದೂರಿನ ಕುರಿತು ಠಾಣೆಗೆ ಹೋದ ಸಂದರ್ಭದಲ್ಲಿ ಸಬ್ ಇನ್ಸ್‌ಪೆಕ್ಟರ್ ಪಾಷಾ ಮತ್ತು ಇನ್ಸ್‌ಪೆಕ್ಟರ್ ಲಕ್ಷ್ಮಯ್ಯ ನಿಮ್ಮ ಪ್ರಕರಣ ಇತ್ಯರ್ಥವಾಗಬೇಕಿದ್ದರೆ ಶಾಸಕರನ್ನು ಭೇಟಿಯಾಗಿ ಎಂದು ತಿಳಿಸಿದ್ದರು.
ಬಳಿಕ ಕೆಜಿಎಫ್ ಶಾಸಕ ವೈ.ಸಂಪಂಗಿಯನ್ನು ಭೇಟಿಯಾದಾಗ, ಕ್ರಿಮಿನಲ್ ಮೊಕದ್ದಮೆ ಮುಚ್ಚಿ ಹಾಕಿ, ಬಿ ರಿಪೋರ್ಟ್ ಹಾಕಿಸುತ್ತೇನೆ. ಐದು ಲಕ್ಷ ರೂ.ಲಂಚ ನೀಡಬೇಕು ಎಂದು ಫರೂಕ್ ಅವರಿಗೆ ಬೇಡಿಕೆ ಇಟ್ಟಿದ್ದ.
ಈ ಪುರಾಣದ ಮುಂದುವರಿದ ಭಾಗವಾಗಿ, ಫರೂಕ್ ಶಾಸಕರ ಭವನದಲ್ಲಿ ಶಾಸಕ ಸಂಪಂಗಿಗೆ 50ಸಾವಿರ ನಗದು, 4.50ಲಕ್ಷ ರೂ.ಗಳ ಚೆಕ್ ನೀಡುತ್ತಿದ್ದಾಗಲೇ ಜ.29ರಂದು ಲೋಕಾಯುಕ್ತ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದರು.
ಬಂಧನದ ರಾತ್ರಿಯೇ ಸಂಪಂಗಿ ಎದೆನೋವೆಂದು ಜಯದೇವ ಆಸ್ಪತ್ರೆಗೆ ದಾಖಲಾಗಿದ್ದರು, ನ್ಯಾಯಾಲಯಕ್ಕೆ ಗೈರು ಹಾಜರಾಗುವ ಮೂಲಕ ನ್ಯಾಯಾಧೀಶರ ಅಸಮಾಧಾನಕ್ಕೂ ಕಾರಣರಾಗಿದ್ದರು. ಸಂಪಂಗಿ ಆರೋಗ್ಯದಲ್ಲಿ ಏನೂ ತೊಂದರೆ ಇಲ್ಲ ಎಂದು ಜಯದೇವ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಮಾಡಲಾಗಿತ್ತು. ಆದರೂ ಸಂಪಂಗಿ ತನಗೆ ತಲೆನೋವು ಎಂಬ ಸಬೂಬು ಹೇಳಿ ನಿಮಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಹೀಗೆ ಹಲವು ಸುತ್ತಿನ ನಾಟಕ ಬಳಿಕ ಇಂದು ನ್ಯಾಯಾಲಯದಿಂದ ಜಾಮೀನು ದೊರೆತಿದೆ. |