ಮಾಜಿ ಸಚಿವ, ಬೀದರ್ ಕ್ಷೇತ್ರದ ಕಾಂಗ್ರೆಸ್‌ನ ಹಾಲಿ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿ ಬುಧವಾರ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ, ಆಡಳಿತರೂಢ ಬಿಜೆಪಿ ಆಪರೇಶನ್ ಕಮಲವನ್ನು ಮುಂದುವರಿಸಿದೆ.
ಇಂದು ಮಧ್ನಾಹ್ನ 2ಗಂಟೆಗೆ ರಾಜ್ಯಪಾಲರ ಬಳಿ ತೆರಳಿ ಗುರುಪಾದಪ್ಪ ಅವರು ತಮ್ಮ ಶಾಸಕ ಸ್ಥಾನದ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ ಎಂದು ಅವರ ಆಪ್ತಮೂಲಗಳು ತಿಳಿಸಿವೆ.
ಬೀದರ್ ಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡರಾಗಿದ್ದ ಗುರುಪಾದಪ್ಪ ಅವರು, ಈ ಹಿಂದೆ ಜನತಾಪಾರ್ಟಿ, ಜನತಾದಳ, ಕಾಂಗ್ರೆಸ್ ಪಕ್ಷಗಳಲ್ಲಿ ಶಾಸಕ, ಸಚಿವರಾಗಿ ಸೇವೆ ಸಲ್ಲಿಸಿದ್ದರು. ಇದೀಗ ಬಿಜೆಪಿಗೆ ತೆಕ್ಕೆಗೆ ಸೇರಿಕೊಳ್ಳುವ ಮೂಲಕ ಕಾಂಗ್ರೆಸ್‌ಗೆ ಬಲವಾದ ಹೊಡೆತ ಬಿದ್ದಂತಾಗಿದೆ.
ಆಪರೇಶನ್ ಕಮಲ ನಡೆಸುವ ಮೂಲಕ ರಾಜ್ಯದಲ್ಲಿ ಇತ್ತೀಚೆಗಷ್ಟೇ ಏಳು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುವಂತಾಗಿತ್ತು. ಆ ಬಳಿಕ ತಾವು ಯಾವುದೇ ಕಾರಣಕ್ಕೂ ಆಪರೇಶನ್ ಕಮಲ ಮುಂದುವರಿಸುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಪಕ್ಷದ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದ ಗೌಡ ಕೂಡ ಸ್ಪಷ್ಟಪಡಿಸಿದ್ದರು.
ಆದರೆ ಇದೀಗ ಮತ್ತೆ ಎರಡನೇ ಹಂತದ ಆಪರೇಶನ್ ಕಮಲಕ್ಕೆ ಮುಂದಾಗಿರುವ ಬಿಜೆಪಿ ರಣತಂತ್ರಕ್ಕೆ ಬೀದರ್ ಶಾಸಕ ಗುರುಪಾದಪ್ಪ ನಾಗಮಾರಪಲ್ಲಿಯನ್ನು ಪರಿವಾರಕ್ಕೆ ಸೇರಿಸಿಕೊಂಡಿದ್ದಾರೆ. ಆ ಮೂಲಕ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಮತ್ತಷ್ಟು ಶಾಸಕರನ್ನು ತನ್ನತ್ತ ಸೆಳೆಯುವ ಕಾರ್ಯಾಚರಣೆಗೆ ಮುಂದಾಗಿದೆ. |